ಪರೀಕ್ಷೆಗಳು ಸಾಮಾನ್ಯವಾಗಿ ಮುಂದೂಡಿಕೆಯಾಗಿರುವುದನ್ನು ಈವರೆಗೆ ಕೇಳಿದ್ದೇವೆ. ನಿಗದಿಪಡಿಸಲಾಗಿದ್ದ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಿಕೆ ಮಾಡಲಾಗುತ್ತದೆ. ಆದರೆ ನಿಗದಿಯಾಗಿದ್ದ ಪರೀಕ್ಷೆಯನ್ನು ಹಿಂದೂಡಿಕೆ ಮಾಡಿ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಘಟನೆ ಈಗ ನಡೆದಿದೆ.
ಹೌದು, ಡಿಪ್ಲೋಮೋ ನರ್ಸಿಂಗ್ ಅಂತಿಮ ವರ್ಷದ ಪರೀಕ್ಷೆಯನ್ನು ನವೆಂಬರ್ ತಿಂಗಳಿನಲ್ಲಿ ನಡೆಸಲು ತೀರ್ಮಾನಿಸಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದಕ್ಕಾಗಿ ವಿದ್ಯಾರ್ಥಿಗಳು ತಯಾರಿಯನ್ನೂ ನಡೆಸಿದ್ದರು. ಆದರೆ ಇದೀಗ ಏಕಾಏಕಿ ಸೆಪ್ಟೆಂಬರ್ 28ರಿಂದಲೇ ಪರೀಕ್ಷೆ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.
ಪರೀಕ್ಷೆ ಹಿಂದೂಡಿಕೆ ಮಾಡಲಾಗಿರುವ ಕಾರಣ ವಿದ್ಯಾರ್ಥಿಗಳಿಗೆ ತಯಾರಿ ನಡೆಸಲು ಕೇವಲ 13 ದಿನಗಳ ಕಾಲ ಮಾತ್ರ ಅವಕಾಶ ಸಿಕ್ಕಂತಾಗಿದೆ. ಶೈಕ್ಷಣಿಕ ವರ್ಷ ಸರಿದೂಗಿಸಲು ಈ ಕ್ರಮ ಕೈಗೊಂಡಿರುವುದಾಗಿ ಪರೀಕ್ಷಾ ಮಂಡಳಿ ಹೇಳುತ್ತಿದೆಯಾದರೂ ಈ ಹಿಂದೆ ವೇಳಾಪಟ್ಟಿ ನಿಗದಿಪಡಿಸುವಾಗ ಈ ವಿಚಾರ ಗಮನಕ್ಕೆ ಬಂದಿರಲಿಲ್ಲವೇ ಎಂಬ ಪ್ರಶ್ನೆ ಈಗ ಮೂಡಿದೆ.