ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ಅಧೀನ ಸೇವೆಗಳ ಆಯ್ಕೆ ಆಯೋಗವು ಆಯೋಜಿಸಿದ್ದ (UPSSSC) ಉತ್ತರ ಪ್ರದೇಶ ಪ್ರಾಥಮಿಕ ಅರ್ಹತಾ ಪರೀಕ್ಷೆಗೆ (ಪಿಇಟಿ) ಹಾಜರಾಗಲು ದೂರದ ಊರುಗಳಿಂದ ಬಂದ ಅಭ್ಯರ್ಥಿಗಳಿಂದಾಗಿ ರೈಲು ನಿಲ್ದಾಣ ಕಿಕ್ಕಿರಿದು ಕಾಲಿಡಲೂ ಆಗದಷ್ಟು ಅವ್ಯವಸ್ಥೆಯ ತಾಣವಾಗಿತ್ತು. ಪರೀಕ್ಷಾರ್ಥಿಗಳೆಲ್ಲಾ ಜೀವದ ಹಂಗು ತೊರೆದು ರೈಲಿನಲ್ಲಿ ಪ್ರಯಾಣಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗಳೊಂದಿಗೆ ವೈರಲ್ ಆಗುತ್ತಿವೆ.
ನಿನ್ನೆ (ಅಕ್ಟೋಬರ್ 15) ಮತ್ತು ಇಂದು (16) ಈ ಪರೀಕ್ಷೆ ನಡೆಸುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿತ್ತು. ಭಾರಿ ಮಳೆಯಿಂದ ಹಲವು ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡುವಂತೆ ಹಲವು ವಿದ್ಯಾರ್ಥಿಗಳು ಬೇಡಿಕೆ ಒಡ್ಡಿದ್ದರು. ಆದರೆ ಸಕಲ ಸಾರಿಗೆ ಸೌಕರ್ಯ ಮಾಡುವುದಾಗಿ ಸರ್ಕಾರ ಹೇಳಿತ್ತು. ಈ ಪರೀಕ್ಷೆ ಬರೆಯಲು 37 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬೇರೆ ಬೇರೆ ಊರುಗಳಿಂದ ಆಗಮಿಸಿದ್ದರು.
ಸಾರಿಗೆ ವ್ಯವಸ್ಥೆ ಹಲವೆಡೆ ಇಲ್ಲದ ಕಾರಣ, ರೈಲಿನಲ್ಲಿಯೇ ಹೆಚ್ಚಿನ ಮಂದಿ ಪ್ರಯಾಣ ಮಾಡಿದ್ದರಿಂದ ರೈಲು ಹಾಗೂ ರೈಲು ನಿಲ್ದಾಣಗಳು ಅವ್ಯವಸ್ಥೆಯ ಆಗರವಾಗಿರುವುದು ಕಂಡುಬಂದಿದೆ.
ಪರೀಕ್ಷೆಯನ್ನು ಬರೆಯುವುದಕ್ಕಿಂತ ದೊಡ್ಡ ಸವಾಲಾಗಿದ್ದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ತಲುಪುವುದಾಗಿತ್ತು. ಇದರಿಂದ ಸಹಸ್ರಾರು ವಿದ್ಯಾರ್ಥಿಗಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದ ವರುಣ್ ಗಾಂಧಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ‘ಪರೀಕ್ಷಾ ಕೇಂದ್ರಗಳನ್ನು ತಲುಪಲು ವಿದ್ಯಾರ್ಥಿಗಳಿಗೆ ಸಾಕಷ್ಟು ಸಾರಿಗೆ ವ್ಯವಸ್ಥೆ ಸರ್ಕಾರ ಮಾಡಲಿಲ್ಲ. ವಿದ್ಯಾರ್ಥಿಗಳ ನಿರಂತರ ಬೇಡಿಕೆಯ ಹೊರತಾಗಿಯೂ ಪರೀಕ್ಷೆಯನ್ನು ಮುಂದೂಡಲಾಗಿಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವೀಕ್ಷಣೆ ಮಾಡಿದ್ದರು. ಇದನ್ನು ಉಲ್ಲೇಖಿಸಿರುವ ವರುಣ್ ಗಾಂಧಿ ಅವರು, ಮುಖ್ಯಮಂತ್ರಿಗಳನ್ನು ಟೀಕಿಸುತ್ತಾ, ‘ಬಹುಶಃ ವೈಮಾನಿಕ ಸಮೀಕ್ಷೆ ಭೂಮಿಯ ಮೇಲಿನ ಸಮಸ್ಯೆಗಳನ್ನು ತೋರಿಸಿದಂತೆ ಕಾಣುತ್ತಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ಇಷ್ಟೊಂದು ತೊಂದರೆಯಾಗಿದೆ’ ಎಂದು ಟೀಕಿಸಿದ್ದಾರೆ.
ಇದಕ್ಕೂ ಮೊದಲು ಟ್ವೀಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ, ‘ರಾಜ್ಯದಾದ್ಯಂತ 11 ನಗರಗಳಲ್ಲಿ ಅಗ್ಗದ ದೇಶೀಯ ವಿಮಾನಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು’ ಎಂದು ಹೇಳಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪರೀಕ್ಷಾರ್ಥಿಗಳು ‘ರಾಜ್ಯದಲ್ಲಿ ಜನರು ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ ರಾಜ್ಯ ಸರ್ಕಾರ ಅಭ್ಯರ್ಥಿಗಳಿಗೆ ಬಸ್ ಮತ್ತು ರೈಲು ಸಾರಿಗೆ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳದಿರುವುದು ಶೋಚನೀಯ’ ಎಂದಿದ್ದಾರೆ.