ಕೆಲದಿನಗಳ ಹಿಂದಷ್ಟೇ ವಿದ್ಯಾರ್ಥಿನಿಯೊಬ್ಬಳು ಸ್ಯಾನಿಟರಿ ಪ್ಯಾಡ್ ಕೇಳಿದ ಸಂದರ್ಭದಲ್ಲಿ ಮಹಿಳಾ ಅಧಿಕಾರಿ, ಹೀಗೆ ಉಚಿತವಾಗಿ ಕೊಟ್ಟರೆ ನೀವುಗಳು ಮುಂದೆ ಕಾಂಡೋಮ್ ಸಹ ಕೇಳುತ್ತೀರಿ ಎಂದು ದರ್ಪದ ಮಾತುಗಳನ್ನು ಆಡಿದ್ದರು. ಇದು ದೊಡ್ಡ ವಿವಾದವಾದ ಬಳಿಕ ಅಧಿಕಾರಿ ಕ್ಷಮೆ ಕೇಳಿದ್ದು, ಇದೀಗ ಮತ್ತೊಬ್ಬ ಅಧಿಕಾರಿಯ ವರ್ತನೆ ಟೀಕೆಗೆ ಗುರಿಯಾಗಿದೆ.
ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ 15 ದಿನಗಳಿಂದ ಈ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರ ಪರಿಣಾಮ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಬಡ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮನೆಯಿಂದ ಹೊರಬರಲು ಸಹ ಕಷ್ಟವಾಗಿರುವ ಕಾರಣ ಸಹಜವಾಗಿಯೇ ಜನ ಪರಿಹಾರ ಸಾಮಗ್ರಿಯನ್ನು ಮನೆಗಳಿಗೆ ತಲುಪಿಸಿ ಎಂದು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇಷ್ಟಕ್ಕೆ ಸಿಡಿಮಿಡಿಗೊಂಡ ಅಂಬೇಡ್ಕರ್ ನಗರ ಜಿಲ್ಲಾಧಿಕಾರಿ, ಅಲ್ಲಿನ ಗ್ರಾಮವೊಂದರ ಜನತೆಗೆ, ನೀವು ಇರುವ ಜಾಗಕ್ಕೆ ಪರಿಹಾರ ಸಾಮಗ್ರಿ ವಿತರಿಸಲು ಸರ್ಕಾರವೇನು ಝೋಮ್ಯಾಟೋ ನಡೆಸುತ್ತಿಲ್ಲ. ಸ್ವತಃ ನೀವೇ ಪರಿಹಾರ ಕೇಂದ್ರಗಳಿಗೆ ಬಂದು ಸಾಮಗ್ರಿ ಪಡೆದುಕೊಂಡು ಹೋಗಬೇಕು. ಅಲ್ಲಿ ಹೆಸರು ನೋಂದಾಯಿಸಿಕೊಂಡವರಿಗೆ ಅಷ್ಟೇ ಆಹಾರ ಎಂದು ಅಹಂಕಾರದ ಮಾತುಗಳನ್ನಾಡಿದ್ದು, ಇದು ಈಗ ವ್ಯಾಪಕ ಚರ್ಚೆಯಾಗುತ್ತಿದೆ.