ಪರಿಸರಕ್ಕೆ ಹಾನಿಕಾರಕವಲ್ಲದ ಜೇಡಿಮಣ್ಣಿನ ನೈಸರ್ಗಿಕ ಗಣಪತಿ ಪೂಜಿಸುವ ಮೂಲಕ ಪರಿಸರ ಕಾಳಜಿ ವ್ಯಕ್ತಪಡಿಸೋಣ. ಆ ಮೂಲಕ ಜಲ ಮೂಲಗಳ ಉಳಿವಿಗೆ ನಮ್ಮದೊಂದಿಷ್ಟು ಪ್ರಯತ್ನ ಮಾಡೋಣ.
ವಿಷಕಾರಿ ರಾಸಾಯನಿಕ, ಲೋಹದ ಲೇಪದ, ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣೇಶನ ಮೂರ್ತಿ ಬಳಸದೇ, ಸಾದಾ ಜೇಡಿಮಣ್ಣಿನ ಪುಟ್ಟ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿ. ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗಣಪತಿ ಪೂಜಿಸಬೇಕು.
ಸಾಮೂಹಿಕವಾಗಿ ನಡೆಸುವ ಗಣಪತಿ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ಎಲ್ಲಿಯೂ ಪ್ಲಾಸ್ಟಿಕ್ ಬಳಸಬೇಡಿ, ಬಾವಿ, ಕೆರೆ, ನದಿಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಡಿ, ಹಾಗೆ ಮಾಡುವುದರಿಂದ ಅಂತರ್ಜಲ, ಕುಡಿಯುವ ನೀರಿನ ಸೆಲೆ ಹಾಳಾಗುತ್ತವೆ. ಇದರ ಬದಲಿಗೆ ಬಕೆಟ್ ಗಳಲ್ಲಿ, ಸಂಚಾರಿ ವಿಸರ್ಜನಾ ವಾಹನಗಳಲ್ಲಿ ಗಣಪತಿ ವಿಸರ್ಜನೆ ಮಾಡಿರಿ.
ಸೂಚಿಸಿರುವ ಕೆರೆಗಳಲ್ಲಿ ಗಣಪತಿ ವಿಸರ್ಜಿಸುವ ಮೊದಲು ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರಗಳನ್ನು ತೆಗೆಯಿರಿ. ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ. ಪಟಾಕಿಯ ಹೊಗೆ ವಿಷಕಾರಿಯಾಗಿರುತ್ತದೆ. ಅದರಿಂದ ಪರಿಸರಕ್ಕೂ ಹಾನಿಯಾಗುತ್ತದೆ. ಅಬ್ಬರದ ಮೈಕ್, ಧ್ವನಿವರ್ಧಕ ಬಳಸಬೇಡಿ. ಗಣಪತಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ.