alex Certify ಪರಿಸರವನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ‘ವಿಶ್ವ ಪರಿಸರ ದಿನ ಸಾರ್ಥಕವಾಗುತ್ತದೆ’: ಆರಗ ಜ್ಞಾನೇಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಸರವನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ‘ವಿಶ್ವ ಪರಿಸರ ದಿನ ಸಾರ್ಥಕವಾಗುತ್ತದೆ’: ಆರಗ ಜ್ಞಾನೇಂದ್ರ

ಶಿವಮೊಗ್ಗ : ಪ್ರಾಣಿ-ಪಕ್ಷಿ-ವನ ಸೇರಿದಂತೆ ನಮ್ಮ ಪರಿಸರವನ್ನು ಪ್ರೀತಿ ಮತ್ತು ಕಾಳಜಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ವಿಶ್ವ ಪರಿಸರ ದಿನ ಸಾರ್ಥಕವಾಗುತ್ತದೆ. ಆದ್ದರಿಂದ ಇಂದೇ ಈ ನಿಟ್ಟಿನಲ್ಲಿ ನಾವು ಸಂಕಲ್ಪ ತೊಡೋಣ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ (Araga Gyanendra) ಹೇಳಿದರು.

ಇಂದು ಸಕ್ರೆಬೈಲಿನ ಆನೆ ಬಿಡಾರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ (Environment Day) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ಲಾಸ್ಟಿಕ್ ಮಾಲಿನ್ಯ ತೊಲಗಿಸಿ’

(Eliminate plastic pollution’ ) ಎಂಬ ಘೋಷವಾಕ್ಯದಡಿ ಈ ಸಾಲಿನ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆ ನಮಗೆ ಮಾರಕ. ಪ್ಲಾಸ್ಟಿಕ್ ಇಲ್ಲದ ಕಾಲದಲ್ಲಿಯೂ ನಾವು ನೆಮ್ಮದಿಯಿಂದ ಬದುಕುತ್ತಿದ್ದೆವೆವು. ಮಾರಕವಾಗಿರುವ ಪ್ಲಾಸ್ಟಿಕ್ನ್ನು ಉಪಯೋಗಿಸುವುದಿಲ್ಲವೆಂಬ ಸಂಕಲ್ಪವನ್ನು ಈಗಿನಿಂದಲೇ ಮಾಡೋಣ ಎಂದು ಕರೆ ನೀಡಿದರು.

ಪ್ರಕೃತಿ ನಮ್ಮ ಆಸೆಗಳನ್ನು ಪೂರೈಸುತ್ತದೆ, ದುರಾಸೆಯನ್ನಲ್ಲ ಎಂಬುದನ್ನು ನೆನಪಿಟ್ಟಿ, ಪ್ರಜ್ಞಾವಂತರಾಗಿ ಪರಿಸರದ ಕಾಳಜಿ ವಹಿಸಬೇಕು. ಜಿಲ್ಲೆಯಲ್ಲಿ ಹಿಂದಿದ್ದ ನಿತ್ಯಹರಿದ್ವರ್ಣದ ಕಾಡು ಕಳೆದುಹೋಗುತ್ತಿದೆ. ತಾಪಮಾನ ಏರುತ್ತಿದೆ. ಆದ್ದರಿಂದ ನಮ್ಮನೆಲ್ಲ ರಕ್ಷಿಸುವ ಪರಿಸರವನ್ನು ಉಳಿಸಲು ನಾವು ಕಾಳಜಿಯಿಂದ ವರ್ತಿಸಬೇಕು. ಒಂದೊಂದು ಹನಿ ನೀರು ನಮ್ಮ ದೇಹದ ಒಂದೊಂದು ಹನಿ ರಕ್ತದಂತೆ. ಅದನ್ನು ಕಾಪಾಡಬೇಕು. ಪ್ಲಾಸ್ಟಿಕ್ ಸೇರಿದಂತೆ ಎಲ್ಲ ರೀತಿಯ ಮಾಲಿನ್ಯ ತಡೆದು ಪರಿಸರ ಸಂರಕ್ಷಣೆ ಮಾಡುವ ಪ್ರತಿಜ್ಞೆ ಮಾಡೋಣ ಎಂದರು.
ಪರಿಸರ ತಜ್ಞರಾದ ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಕೈಗಾರಿಕಾ ಕ್ರಾಂತಿ ಆರಂಭವಾಗಿ ಕೇವಲ 120 ವರ್ಷಗಳಲ್ಲಿ ಪರಿಸರಕ್ಕೆ ಎಷ್ಟೊಂದು ಹಾನಿಯಾಗಿದೆ ಎಂಬುದನ್ನು ಕಾಣಬಹುದು. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಪಶ್ಚಿಮ ಯೂರೋಪ್ ಮತ್ತು ಅಮೇರಿಕಾ ದೇಶಗಳು ಯಥೇಚ್ಚವಾಗಿ ಕಲ್ಲಿದ್ದಲು, ಪೆಟ್ರೋಲಿಯಂ ಬಳಕೆ ಮಾಡಿದ್ದರಿಂದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿ ಪರಿಸರ ನಾಶಕ್ಕೆ ಕಾರಣವಾಯಿತು.

1972 ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಸ್ಟಾಕ್ಹೋಂ ನಲ್ಲಿ ಜೂನ್ 5 ರಂದು ಜಾಗತಿಕ ಸಮ್ಮೇಳನ ನಡೆಯಿತು. ಅದರ ನೆನಪಿನ ಅಂಗವಾಗಿ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.ಸಾವಿರಾರು ಮಾಲಿನ್ಯಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಒಂದಾಗಿದೆ. ಪ್ಲಾಸ್ಟಿಕ್ನಿಂದ ಹಲವಾರು ಉಪಯೋಗಗಳಿದ್ದರೂ ಅಷ್ಟೇ ಅಪಾಯಕಾರಿಯಾಗಿದೆ. ಪ್ಲಾಸ್ಟಿಕ್ ಅದರಲ್ಲೂ ಏಕಬಳಕೆಯ ಪ್ಲಾಸ್ಟಿಕ್ ಅತ್ಯಂತ ಅಪಾಯಕಾರಿ. ಪ್ಲಾಸ್ಟಿಕ್ ಇತರೆ ಜೈವಿಕ ವಸ್ತುಗಳಂತೆ ಜೈವಿಕ ವಿಘಟನೆಗೆ ಒಳಗಾಗದ ಕಾರಣ ಸಾವಿರಾರು ವರ್ಷ ಮೈಕ್ರೋ ಪ್ಲಾಸ್ಟಿಕ ಕಣಗಳಾಗಿ ಪರಿಸರದಲ್ಲಿ, ನಾವು ಉಸಿರಾಡುವ ಗಾಳಿಯಲ್ಲಿ ಸೇರಿ ಹಾನಿಯುಂಟು ಮಾಡುತ್ತಿದೆ. ಭೂಮಿಯ ಮೈಕ್ರೊ ಆರ್ಗಾನಿಸಮ್ನ ಕೊಲ್ಲುತ್ತಿದೆ.

ಸಮುದ್ರ-ಸಾಗರಗಳಿಗೆ ಸೇರಿಕೊಂಡು ಸಾಗರ ಮಾಲಿನ್ಯದ ಮೂಲಕ ಜಲಚರ ಸರಪಳಿಗೆ ಹಾನಿ ಮಾಡುತ್ತಿದೆ. 1922 ರ ಯುಎನ್ಓ ವರದಿ ಪ್ರಕಾರ ವಿಶ್ವದಲ್ಲಿ ಪ್ರತಿ ವರ್ಷ 430 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಶೇ.51 ಏಷಿಯಾ ರಾಷ್ಟ್ರದಲ್ಲಿ ಅದರಲ್ಲೂ ಶೇ.71 ಚೀನಾ ದೇಶದಲ್ಲಿ ಆಗುತ್ತಿದೆ. 80 ಲಕ್ಷ ಟನ್ನಷ್ಟು ಪ್ಲಾಸ್ಟಿಕ್ ಸಾಗರ ಸೇರುತ್ತಿದೆ.

ಏಕ ಬಳಕೆಯ ಪ್ಲಾಸ್ಟಿಕ್ ನಮ್ಮ ದೊಡ್ಡ ಶತ್ರುವಾಗಿದ್ದು, ನಾವು ಬಳಸಿ ಎಸೆದ ಪ್ಲಾಸ್ಟಿಕ್ ಸಾವಿರಾರು ವರ್ಷ ಮಾಲಿನ್ಯ ಉಂಟು ಮಾಡುತ್ತದೆ. ವರ್ಷಕ್ಕೆ 35 ಲಕ್ಷ ಟನ್ ಪ್ಲಾಸ್ಟಿಕ್ ವೇಸ್ಟ್ ಉತ್ಪಾದನೆಯಾಗುತ್ತಿದ್ದು ಅದರಲ್ಲಿ ಶೇ.68 ಏಕಬಳಕೆ ಪ್ಲಾಸ್ಟಿಕ್ ಆಗಿದೆ.

ಏಕ ಬಳಕೆ ಪ್ಲಾಸ್ಟಿಕ್ ಮಾಲಿನ್ಯದ ದೊಡ್ಡ ಕಾರಣ ಏಕಬಳಕೆ ನೀರಿನ ಬಾಟಲ್ ಮಾರುಕಟ್ಟೆ ವ್ಯಾಪಕವಾಗಿ ನಮ್ಮಲ್ಲಿ ಬೆಳೆಯುತ್ತಿರುವುದು. ಮದುವೆ ಮನೆಗಳಲ್ಲಿ ಸಾವಿರಾರು ನೀರಿನ ಬಾಟಲ್ ಬಳಸಿ ತಿಪ್ಪೆಗೆ ಎಸೆಯಲಾಗುತ್ತಿದೆ. ಕೇಂದ್ರ ಸರ್ಕಾರ 2022 ರ ಜುಲೈ ಲ್ಲಿ 19 ರೀತಿಯ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಅದರ ಜಾರಿ ವಿಫಲವಾಗಿದೆ. ಕಾರಣ ನಾವುಗಳು. ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣ ನಾವೆ. ಪರಿಹಾರವೂ ನಮ್ಮ ಕೈಯಲ್ಲಿದ್ದು ಇನ್ನು ಮುಂದೆ ಪ್ಲಾಸ್ಟಿಕ್ ಕವರ್, ಸ್ಟ್ರಾ ಇತ್ಯಾದಿ ಏಕಬಳಕೆ ಪ್ಲಾಸ್ಟಿಕ್ ಬಳಸುವುದಿಲ್ಲವೆಂದು ಯುವಜನತೆ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ನಿರ್ಧಾರ ಕೈಗೊಳ್ಳಬೇಕು ಎಂದು ಕರೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...