ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪಠ್ಯಪುಸ್ತಕ ಪರಿಷ್ಕರಣೆಯನ್ನು ವಿರೋಧಿಸಿ ಶನಿವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿಯವರೂ ಸಹ ಬೆಂಬಲಿಸಿದ್ದರು.
ಇದರ ಮಧ್ಯೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಸರ್ಕಾರ ಈ ಕುರಿತಂತೆ ಈಗಾಗಲೇ ಸ್ಪಷ್ಟ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.
ಈಗಾಗಲೇ ತಿಳಿಸಿರುವಂತೆ ಪರಿಷ್ಕೃತ ಪಠ್ಯ ಪುಸ್ತಕದಲ್ಲಿರುವ ಕೆಲ ಆಕ್ಷೇಪಾರ್ಹ ಅಂಶಗಳನ್ನು ಸರಿಪಡಿಸಿ ಅಂತಹ ಅಧ್ಯಾಯಗಳನ್ನು ಮರು ಮುದ್ರಿಸಿ ಶಾಲೆಗಳಿಗೆ ಕಳುಹಿಸುತ್ತೇವೆ. ಈ ಕಾರ್ಯವನ್ನು ಇನ್ನೊಂದು ತಿಂಗಳೊಳಗೆ ಪೂರ್ಣಗೊಳಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.