ಪರಶಿವ, ಸದಾಶಿವ, ಈಶ್ವರ, ಶಂಭು, ಉಮಾಪತಿ, ಗಂಗಾಧರ ಹೀಗೆ ನೂರಾರು ಹೆಸರಿನಿಂದ ಕೊಂಡಾಡುವ ಶಿವನನ್ನು ಸೃಷ್ಠಿಯ ಲಯಕಾರ ಎಂದು ಕರೆಯುತ್ತಾರೆ. ಭಕ್ತರ ಕರೆಗೆ ತಕ್ಷಣ ಒಲಿಯುವ ಕರುಣಾಮಯಿ ಈತ. ಶಿವ ಸರಳತೆಯ ಪ್ರತಿರೂಪ. ಶಿವನ ಕುಟುಂಬವೂ ನಮಗೆ ಸಹಬಾಳ್ವೆ, ಪ್ರೀತಿ, ವಿಶ್ವಾಸವನ್ನ ಹೇಗೆ ಪರಸ್ಪರ ಬೆಳೆಸಿಕೊಳ್ಳಬೇಕು ಎಂಬುದನ್ನು ತೋರುವ ಆದರ್ಶ ಸಂಸಾರ.
ಒಮ್ಮೆ ಗಮನಿಸಿ, ಶಿವನ ಪಕ್ಕ ಕೂತ ಪಾರ್ವತಿ – ಶಿವನ ತಲೆಯ ಮೇಲೆ ಇರುವ ಗಂಗೆ. ಶಿವನ ವಾಹನ ನಂದಿ – ಪಾರ್ವತಿಯ ವಾಹನ ಸಿಂಹ. ಗಣಪನ ವಾಹನ ಇಲಿ – ಶಿವನ ಕೊರಳ ಹಾವು, ಸುಬ್ರಮಣ್ಯನ ವಾಹನ ನವಿಲು. ವಾಸ್ತವ ಪ್ರಪಂಚದಲ್ಲಿ ಇವೆಲ್ಲಾ ಒಬ್ಬರಿಗೊಬ್ಬರು ಬದ್ಧ ವೈರಿಗಳು. ಆದರೆ ಶಿವನ ಕುಟುಂಬದಲ್ಲಿ ಮಾತ್ರ ತಮ್ಮ ವೈರತ್ವವನ್ನು ಮರೆತು ಪ್ರೀತಿ ಸಹಬಾಳ್ವೆ ಇಂದ ಬದುಕುವ ಕುಟುಂಬ. ಶಿವ ಕುಟುಂಬದ ಯಜಮಾನನಾಗಿ ಸಮಸ್ತರನ್ನೂ ಸರಿದೂಗಿಸಿಕೊಂಡು ಹೋಗುವ ನಾಯಕ, ನಾವಿಕ.
ಸಾಕ್ಷಾತ್ ದೇವರೇ ತಮ್ಮ ಉದಾಹರಣೆಯ ಮೂಲಕ ನಮ್ಮೆಲ್ಲರಿಗೂ ಬದುಕಿನ ನಿಜವಾದ ಮೌಲ್ಯಗಳನ್ನು ತಿಳಿಸಿ ಹೇಳುವಂತಿದೆ ಅಲ್ಲವೇ?