ಭುವನೇಶ್ವರ: ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದಲೂ ತಮ್ಮ ಉಸಿರು ನಿಲ್ಲುವವರೆಗೂ ಅನಕ್ಷರತೆ ತೊಲಗಿಸುವುದಕ್ಕಾಗಿ ಬಡ ಜನರಿಗೆ ಉಚಿತ ಶಿಕ್ಷಣ ನೀಡುತ್ತಿದ್ದ ಅಕ್ಷರ ಸಂತ ಇಂದು ಇಹಲೋಕ ತ್ಯಜಿಸಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಅಕ್ಷರ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಒಡಿಶಾದ ನಂದಾ ಪ್ರಸ್ಟಿ(102) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಂದಾ ಅವರನ್ನು ಜೈಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ತಾವು 7ನೇ ತರಗತಿಯವರೆಗೆ ಓದಿದ್ದರೂ ಅನಕ್ಷರತೆ ಇರಬಾರದು ಎಂಬ ಕಾರಣಕ್ಕೆ ಉಚಿತವಾಗಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಶಿಕ್ಷಣ ನೀಡುತ್ತಿದ್ದರು. ಹೀಗಾಗಿ ಅವರನ್ನು ನಂದಾ ಮಾಸ್ಟರ್ ಎಂದೇ ಕರೆಯುತ್ತಿದ್ದರು. ಅವರ ಸೇವೆ ಗಮನಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಇತ್ತೀಚೆಗಷ್ಟೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ನಂದಾ ಮಾಸ್ಟರ್ ಪ್ರಶಸ್ತಿ ಸ್ವೀಕರಿಸಿದ್ದರು.
ನಂದಾ ಮಾಸ್ಟರ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶಿಕ್ಷಣದ ಸಂತೋಷ ಹರಡಲು ನಂದಾ ಜೀ ಮಾಡಿರುವ ಪ್ರಯತ್ನಗಳಿಂದ ಅವರು ಹೆಚ್ಚು ಗೌರವಾನ್ವಿತರಾಗಿದ್ದಾರೆ. ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಪ್ರಶಸ್ತಿ ಸ್ವೀಕರಿಸುವ ಸಮಾರಂಭದಲ್ಲಿ ಅವರು ಹೆಚ್ಚು ಗಮನ ಹಾಗೂ ಪ್ರೀತಿ ಸೆಳೆದಿದ್ದರು. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.