
ನಮ್ಮ ಹೆಸರನ್ನು ಯಾರಿಗೆ ಕೇಳಲು ಇಷ್ಟವಾಗೋದಿಲ್ಲ ಹೇಳಿ? ನಮ್ಮ ಹೆಸರೇ ನಮ್ಮ ಗುರುತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಸರು ಹಿಡಿದು ಕೂಗಿದ್ರೆ ಎಲ್ಲರ ಮುಂದೆ ನಾವು ಪ್ರತ್ಯೇಕ ಎನ್ನಿಸಿಕೊಳ್ತೇವೆ. ಪದೇ ಪದೇ ನಮ್ಮ ಹೆಸರು ಹೇಳಿ ಮಾತನಾಡುವುದು ಸಾಮಾನ್ಯ ಸಂಗತಿಯಲ್ಲ. ಅದ್ರ ಹಿಂದೆ ಅನೇಕ ಕಾರಣಗಳಡಗಿವೆ.
ಇಬ್ಬರ ನಡುವೆ ಸಂವಾದ ನಡೆಯುವ ವೇಳೆ ಒಬ್ಬ ವ್ಯಕ್ತಿ ಪದೇ ಪದೇ ನಿಮ್ಮ ಹೆಸರನ್ನು ಕರೆಯುತ್ತಿದ್ದಾನೆಂದಾದ್ರೆ ಆತನ ಜೀವನದಲ್ಲಿ ನಿಮಗೊಂದು ಸ್ಥಾನವಿದೆ ಎಂದರ್ಥ. ನಿಮ್ಮನ್ನು ವಿಶೇಷವಾಗಿ ಪರಿಗಣಿಸಿದ್ದೇವೆ ಎಂಬುದನ್ನು ಹೇಳಲು ಕೆಲವೊಮ್ಮೆ ಜನರು ಹೆಸರು ಹಿಡಿದು ಕರೆಯುತ್ತಾರೆ.
ಮಾತನಾಡುವ ವ್ಯಕ್ತಿ ತನ್ನ ಮಾತನ್ನು ನೀವು ಕೇಳಬೇಕು ಎನ್ನುವ ಕಾರಣಕ್ಕೆ ನಿಮ್ಮ ಹೆಸರನ್ನು ಪದೇ ಪದೆ ಕರೆಯುತ್ತಾನೆ. ಆತನ ಮಾತಿಗೆ ನೀವು ನೀಡುವ ಪ್ರತಿಕ್ರಿಯೆಯಿಂದ ನೀವು ಆತನ ಮಾತನ್ನು ಎಷ್ಟು ಕೇಳುತ್ತಿದ್ದೀರಿ ಎಂಬುದು ಅರ್ಥವಾಗುತ್ತದೆ. ಒಂದು ವೇಳೆ ನಿಮ್ಮ ಗಮನ ಬೇರೆಡೆಯಿದ್ದಲ್ಲಿ ನಿಮ್ಮನ್ನು ಅಲರ್ಟ್ ಮಾಡಲು ನಿಮ್ಮ ಹೆಸರನ್ನು ಪದೇ ಪದೇ ಕರೆಯುವವರಿದ್ದಾರೆ.
ಮಾತನಾಡುವ ವೇಳೆ ವ್ಯಕ್ತಿಯೊಬ್ಬ ನಿಮ್ಮ ಹೆಸರು ಕೂಗಿದಲ್ಲಿ ಆ ಮಾತುಕತೆ ನಿಮಗೆ ಸದಾ ನೆನಪಿರುತ್ತದೆ ಎಂದು ನಂಬಲಾಗಿದೆ.