2005 ರಲ್ಲಿ ಬಿ.ಎಸ್.ಪಿ. ಶಾಸಕ ರಾಜು ಪಾಲ್ ಹಾಗೂ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಫಿಯಾ ಡಾನ್ ಅತಿಕ್ ಆಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ನನ್ನು ಪತ್ರಕರ್ತರ ವೇಷದಲ್ಲಿ ಬಂದಿದ್ದ ಮೂವರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಈ ಇಬ್ಬರು ಆರೋಪಿಗಳು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಿರುವಾಗಲೇ ಪತ್ರಕರ್ತರಂತೆ ನಟಿಸಿ ಗುಂಪಿನಲ್ಲಿದ್ದ ಕಸ್ಗಂಜ್ ನ ಅರುಣ್ ಮೌರ್ಯ, ಬಂದಾದ ಲವ್ಲೇಶ್ ತಿವಾರಿ ಹಾಗೂ ಅಮೀರ್ ಪುರದ ರೋಹಿತ್ ಅಲಿಯಾಸ್ ಸನ್ನಿ ನೇರವಾಗಿ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿದ್ದಾರೆ.
ಇದರ ಪರಿಣಾಮ ಅತಿಕ್ ಅಹಮದ್ ಹಾಗೂ ಅಶ್ರಫ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಠಾತ್ ನಡೆದ ಈ ಘಟನೆಯಿಂದ ಸ್ಥಳದಲ್ಲಿದ್ದವರು ಭಯಭೀತರಾಗಿದ್ದರು. ಪೊಲೀಸರ ಸಮ್ಮುಖದಲ್ಲಿಯೇ ನಡೆದ ಈ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತಂತೆ ಉನ್ನತ ತನಿಖೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ಈಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಗಾಳಿ ಸುದ್ದಿಗಳನ್ನು ಹರಡದಂತೆ ತಡೆಯುವ ಸಲುವಾಗಿ ಇಂಟರ್ನೆಟ್ ನಿಷೇಧಿಸಲಾಗಿದೆ. ಅಲ್ಲದೆ ಪ್ರಯಾಗ್ ರಾಜ್ ನಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಲಾಗಿದೆ.