ಆಟೋ ರಿಕ್ಷಾದಲ್ಲಿ ಸಾವನ್ನಪ್ಪಿದ ಪತ್ನಿಯ ದೇಹವನ್ನು ಪತಿ ತನ್ನ ಭುಜದ ಮೇಲೆ ಹೊತ್ತು ಹಲವಾರು ಕಿಲೋಮೀಟರ್ ನಡೆದಿರೋ ಹೃದಯ ವಿದ್ರಾವಕ ಘಟನೆ ನಡೆದಿದೆ.
ಒಡಿಶಾದ ಕೊರಾಪುಟ್ ಜಿಲ್ಲೆಯ 35 ವರ್ಷದ ವ್ಯಕ್ತಿಯೊಬ್ಬರು ನೆರೆಯ ಆಂಧ್ರಪ್ರದೇಶದ ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದಾಗ ಆಟೋ ರಿಕ್ಷಾದಲ್ಲಿ ಪತ್ನಿ ಸಾವನ್ನಪ್ಪಿದ್ದರು.
ಪೊಲೀಸರು ವ್ಯಕ್ತಿಯನ್ನ ಗುರುತಿಸಿದ ಬಳಿಕ ಶವವನ್ನ ಪೊಟ್ಟಂಗಿ ಬ್ಲಾಕ್ನ ಸೊರಡ ಗ್ರಾಮಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಸಂಗಿವಲಸದಲ್ಲಿರುವ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದ್ದು, ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಅದಕ್ಕಾಗಿ ಪತಿ ತಮ್ಮ ಹಳ್ಳಿಗೆ ಮರಳಲು ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದರು. ಆದರೆ ದಾರಿ ಮಧ್ಯೆ ಪತ್ನಿ ನಿಧನರಾದರು. ನಂತರ ಆಟೋ ಚಾಲಕ ಪ್ರಯಾಣ ಮುಂದುವರಿಸಲು ನಿರಾಕರಿಸಿ ಸ್ಥಳದಿಂದ ಹೊರಡುವ ಮುನ್ನ ಚೆಲ್ಲೂರು ರಿಂಗ್ ರಸ್ತೆಯಲ್ಲಿ ಅವರನ್ನು ಇಳಿಸಿದ್ದಾನೆ.
ಬೇರೆ ದಾರಿ ಕಾಣದೆ ಪತಿ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಸುಮಾರು 80 ಕಿಲೋಮೀಟರ್ ದೂರದಲ್ಲಿದ್ದ ಮನೆಯತ್ತ ನಡೆಯತೊಡಗಿದ. ಸ್ವಲ್ಪ ಸಮಯದ ನಂತರ ಸ್ಥಳೀಯರು ಎಚ್ಚೆತ್ತು ಗ್ರಾಮಾಂತರ ವೃತ್ತ ನಿರೀಕ್ಷಕರಿಗೆ ಮಾಹಿತಿ ನೀಡಿದ್ದರು.