ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ತಮ್ಮ ಪತ್ನಿ ಭವಾನಿಯವರಿಗೆ ಶತಾಯಗತಾಯ ಟಿಕೆಟ್ ಕೊಡಿಸಲೇಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಈಗ ಮತ್ತೊಂದು ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.
ಹಾಸನ ಕ್ಷೇತ್ರದಲ್ಲಿ ಭವಾನಿಯವರಿಗೆ ಟಿಕೆಟ್ ನೀಡದಿದ್ದರೆ ಹೊಳೆನರಸೀಪುರ ಕ್ಷೇತ್ರದಿಂದ ನನಗೂ ಟಿಕೆಟ್ ಬೇಡ ಎಂದು ಎಚ್.ಡಿ. ರೇವಣ್ಣನವರು ಹೇಳಿದ್ದು, ತಮ್ಮ ಹಿರಿಯ ಸಹೋದರ ಬಾಲಕೃಷ್ಣೇಗೌಡ ಸೇರಿದಂತೆ ಆಪ್ತರ ಮೂಲಕ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ಹಾಸನ ಕ್ಷೇತ್ರ ಜೆಡಿಎಸ್ ಕೈತಪ್ಪಿದ್ದು, ಇದನ್ನು ಈ ಬಾರಿ ಮರಳಿ ಪಡೆಯಲೇಬೇಕಿದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸುವುದು ಅನಿವಾರ್ಯವಾಗಿದ್ದು, ಹೀಗಾಗಿ ಭವಾನಿಯವರಿಗೆ ಟಿಕೆಟ್ ನೀಡಬೇಕೆಂದು ರೇವಣ್ಣ ಆಪ್ತರು ಪ್ರತಿಪಾದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿಯವರು, ಯಾವುದೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಬ್ಲಾಕ್ ಮೇಲ್ ತಂತ್ರಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಹೇಳುತ್ತಿದ್ದು, ಈ ಮೂಲಕ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ. ಹೀಗಾಗಿ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರ ಅಂತಿಮವಾಗಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.