ಮದುವೆಯಾದ ಬಳಿಕ ತನ್ನ ಪತ್ನಿ ದಪ್ಪಗಾಗಿದ್ದಾರೆ ಎಂಬ ಕಾರಣಕ್ಕೆ ಪತಿಯೊಬ್ಬ ತಲಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಇದೀಗ ಈ ಕುರಿತಂತೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಘಟನೆಯ ವಿವರ: ಮೀರತ್ ನ ಮಹಮ್ಮದ್ ಸಲ್ಮಾನ್ ಎಂಬಾತ ಎಂಟು ವರ್ಷಗಳ ಹಿಂದೆ ನಜ್ಮಾರನ್ನು ವಿವಾಹವಾಗಿದ್ದು, ದಂಪತಿಗೆ ಏಳು ವರ್ಷದ ಮಗ ಕೂಡ ಇದ್ದಾನೆ. ಮದುವೆ ನಂತರ ಪತ್ನಿ ದಪ್ಪಗಾಗಿದ್ದರು ಎನ್ನಲಾಗಿದೆ.
ಹೀಗಾಗಿ ಪದೇಪದೇ ಆಕೆಯನ್ನು ಮೂದಲಿಸುತ್ತಿದ್ದ ಮೊಹಮ್ಮದ್ ಸಲ್ಮಾನ್, ಇನ್ನಿಲ್ಲದಂತೆ ಕಿರುಕುಳ ನೀಡಿದ್ದಲ್ಲದೆ ಕಳೆದ ತಿಂಗಳು ಆಕೆಯನ್ನು ಮನೆಯಿಂದ ಹೊರ ಹಾಕಿದ್ದ ಎನ್ನಲಾಗಿದೆ.
ತನ್ನ ಪೋಷಕರ ಮನೆಯಲ್ಲಿ ನಜ್ಮಾ ವಾಸಿಸುತ್ತಿದ್ದು, ಆಗಸ್ಟ್ 28ರಂದು ಐವರೊಂದಿಗೆ ಬಂದ ಮಹಮ್ಮದ್ ಸಲ್ಮಾನ್ ಆಕೆಯನ್ನು ಥಳಿಸಿ ಮೂರು ಬಾರಿ ತಲಾಕ್ ಹೇಳಿ ತೆರಳಿದ್ದಾನೆ. ಇದೀಗ ನಜ್ಮಾ ದಾಖಲಿಸಿರುವ ದೂರಿನ ಮೇರೆಗೆ ತನಿಖೆ ನಡೆಸಿರುವ ಪೊಲೀಸರು ಆತನ ಬಂಧನಕ್ಕೆ ಮುಂದಾಗಿದ್ದಾರೆ.