ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಮೂಲಕ ಅತ್ಯುತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಜೆಡಿಎಸ್ ನಾಯಕರಿಗೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಈಗ ಕಗ್ಗಂಟಾಗಿ ಪರಿಣಮಿಸಿದೆ.
ತಮಗೇ ಟಿಕೆಟ್ ನೀಡಬೇಕೆಂದು ಭವಾನಿ ರೇವಣ್ಣ ಪಟ್ಟು ಹಿಡಿದಿದ್ದು, ಇವರ ಪರವಾಗಿ ಪತಿ ಹೆಚ್.ಡಿ. ರೇವಣ್ಣ, ಪುತ್ರರಾದ ಪ್ರಜ್ವಲ್ ಹಾಗೂ ಸೂರಜ್ ವಕಾಲತ್ತು ನಡೆಸಿದ್ದರು. ಇನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡುವ ಪರವಾಗಿದ್ದು, ಸ್ವರೂಪ್ ಪರ ಒಲವು ಹೊಂದಿದ್ದಾರೆ.
ಅಲ್ಲದೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕುಮಾರಸ್ವಾಮಿಯವರು ಖಡಾಖಂಡಿತವಾಗಿ ಹೇಳುತ್ತಿದ್ದು, ಹೀಗಾಗಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂದು ಹೇಳಲಾಗಿದೆ. ಇದು ಖಚಿತವಾಗುತ್ತಿದ್ದಂತೆಯೇ ಹೆಚ್.ಡಿ. ರೇವಣ್ಣ ಹೊಸ ಸೂತ್ರ ಒಂದನ್ನು ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರ ಮುಂದಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದರ ಅನುಸಾರ ಹೊಳೆನರಸೀಪುರ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದಿಂದ ತಮಗೆ ಅವಕಾಶ ನೀಡಬೇಕೆಂದು ಹೆಚ್.ಡಿ. ರೇವಣ್ಣ ಕೇಳುತ್ತಿದ್ದು, ಒಂದೊಮ್ಮೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಅಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಪತ್ನಿ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ಇದರ ಹಿಂದಿದೆ ಎನ್ನಲಾಗಿದೆ. ಈ ಪ್ರಸ್ತಾವನೆಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.