ಮುಂಬೈ: ವಿಚ್ಛೇದನ ನೀಡಿದ ಪತ್ನಿಗೆ ಜೀವನಾಂಶದ ಜೊತೆಗೆ ಆಕೆ ಸಾಕಿದ ನಾಯಿಗಳಿಗೂ ನಿರ್ವಹಣಾ ಜೀವನಾಂಶ ನೀಡುವಂತೆ ಮುಂಬೈ ಕೋರ್ಟ್ ಆದೇಶ ನೀಡಿರುವ ಘಟನೆ ನಡೆದಿದೆ.
ವಿಚ್ಛೇದನದ ಬಳಿಕ ಪತಿಯ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿ ಪತ್ನಿ ಹಾಗೂ ಮಕ್ಕಳಿಗೆ ಜೀವನ ನಿರ್ವಹಣೆಗೆ ಜೀವನಾಂಶ ನೀಡುವಂತೆ ಕೋರ್ಟ್ ಆದೇಶ ಮಾಡುವುದು ಸಹಜ. ಆದರೆ ಮುಂಬೈನಲ್ಲಿ ನಡೆದ ಪ್ರಕರಣದಲ್ಲಿ ಮಹಿಳೆಯ ಜೊತೆಗೆ ಆಕೆ ಸಾಕಿರುವ ಮೂರು ಸಾಕುನಾಯಿಗಳಿಗೂ ಜೀವನಾಂಶ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ.
35 ವರ್ಷಗಳ ದಾಂಪತ್ಯ ಜೀವನ ಬಳಿಕ 2021 ರಲ್ಲಿ ಬೇರ್ಪಟ್ಟಿದ್ದ ಪತಿ-ಪತ್ನಿ ಪ್ರಕರಣ ಇದಾಗಿದ್ದು, ಪತಿ ವಿರುದ್ಧ ಪತ್ನಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದರು. ಅಲ್ಲದೇ ತನ್ನ ಜೀವನ ನಿರ್ವಹಣೆಗಾಗಿ ಪತಿಯಿಂದ ಜೀವನಾಂಶಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ತನ್ನ ಜೀವನ ನಿರ್ವಹಣೆ ಮಾತ್ರವಲ್ಲ, ತಮ್ಮ ಮನೆಯಲ್ಲಿರುವ ಮೂರು ನಾಯಿಗಳ ನಿರ್ವಹಣೆಗಾಗಿಯೂ ಪತಿ ಮಾಸಿಕ 70 ಸಾವಿರ ರೂಪಾಯಿ ಹೆಚ್ಚುವರಿ ಜೀವನಾಂಶ ಕೊಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸ್ಥಳೀಯ ಕೋರ್ಟ್, ಮಹಿಳೆ ಅರ್ಜಿ ಪುರಸ್ಕರಿಸಿದ್ದು, ಆಕೆ ಸಾಕಿರುವ ಮೂರು ನಾಯಿಗಳಿಗೂ ಜೀವನ ನಿರ್ವಹಣೆಗಾಗಿ ಜೀವನಾಂಶ ನೀಡುವಂತೆ ತಿಳಿಸಿದೆ.
1986ರಲ್ಲಿ ವಿವಾಹವಾಗಿದ್ದ ದಂಪತಿಗೆ ಇಬ್ಬರು ಪುತ್ರಿಯರಿದ್ದು ವಿದೇಶದಲ್ಲಿ ವಾಸವಾಗಿದ್ದಾರೆ. 2021ರಲ್ಲಿ ಪತಿಯಿಂದ ದೂರವಾದ ಪತ್ನಿ ಮುಂಬೈಗೆ ಬಂದು ನೆಲೆಸಿದ್ದರು. ಅಲ್ಲದೇ ಜೀವನಾಂಶಕ್ಕಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ತನಗೆ ಯಾವುದೆ ಆದಾಯ ಮೂಲಗಳು ಇಲ್ಲ, ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದೇನೆ. ಅಲ್ಲದೇ ಮೂರು ರಾಟ್ ವೀಲರ್ ನಾಯಿಗಳು ತನ್ನನ್ನು ಅವಲಂಬಿಸಿವೆ ಎಂದು ಮಹಿಳೆ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಜೀವನ ನಿರ್ವಹಣೆಗೆ ಮಾಸಿಕ 70 ಸಾವಿರ ರೂಪಾಯಿಯನ್ನು ಪತಿಯಿಂದ ಕೇಳಿದ್ದರು.
ಆದರೆ ಮಹಿಳೆಯ ಪತಿ ಇದನ್ನು ನಿರಾಕರಿಸಿದ್ದರಲ್ಲದೇ, ತನ್ನ ಪತ್ನಿ ತನ್ನ ಸ್ವ ಇಚ್ಛೆಯಿಂದ ಮನೆ ತೊರೆದಿದ್ದಾಳೆ. ಅಲ್ಲದೇ ಆಕೆಗೆ ಸಾಕಷ್ಟು ಆದಾಯ ಮೂಲಗಳಿವೆ. ನಾನು ವ್ಯಾಪಾರದಲ್ಲಿ ನಷ್ಟ ಹೊಂದಿದ್ದೇನೆ ಹಾಗಾಗಿ ಹೆಚ್ಚುವರಿ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದಿದ್ದರು.
ಎರಡೂ ಕಡೆ ವಾದ-ವಿವಾದ ಆಲಿಸಿದ ಮುಂಬೈ ಮೆಟ್ರೊ ಪೊಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಕೋಮಲ್ ಸಿಂಗ್, ಮಧ್ಯಂತರ ಜೀವನಾಂಶ ಪಡೆಯಲು ಮಹಿಳೆ ಅರ್ಹಳು. ಮಹಿಳೆಯ ವಯಸ್ಸು, ಆಕೆಯ ಕಾಯಿಲೆಗಳು ಹಾಗೂ ಸಾಕು ಪ್ರಾಣಿಗಳು ಆಕೆಗೆ ಆರ್ಥಿಕ ಹೊರೆಯಾಗಿರುವುದರಿಂದ ಜೀವನಾಂಶ ನಿರ್ವಹಣಾ ವೆಚ್ಚ ಭರಿಸಲು ಹೆಚ್ಚುವರಿ ಜೀವನಾಂಶ ನೀಡಬೇಕು. ಸಾಕುಪ್ರಾಣಿಗಳು ಯೋಗ್ಯ ಜೀವನ ಶೈಲಿಯ ಅಗತ್ಯ ಭಾಗ. ಆರೋಗ್ಯಕರ ಜೀವನ ನಡೆಸಲು ಮನುಷ್ಯನಿಗೆ ಇವುಗಳು ಅವಶ್ಯಕವಾಗಿವೆ. ಮುರಿದುಹೋದ ಸಂಬಂಧಗಳಿಂದ ಉಂಟಾಗುವ ಭಾವನಾತ್ಮಕ ಕೊರತೆ ನೀಗಿಸಲು ಸಾಕುಪ್ರಾಣಿಗಳು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಮಹಿಳೆ ಪತಿ ಮಾಸಿಕ 50 ಸಾವಿರ ರೂಪಾಯಿ ಮಧ್ಯಂತರ ನಿರ್ವಹಣಾ ವೆಚ್ಚ ಭರಿಸುವಂತೆ ಆದೇಶ ನೀಡಿದ್ದಾರೆ.