ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ 32 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ 34 ವರ್ಷದ ಪತಿ ಕೋವಿಡ್ -19 ಗೆ ಬಲಿಯಾದ 11 ತಿಂಗಳ ನಂತರ, ವಿಟ್ರೊ ಫಲೀಕರಣ ಪ್ರಕ್ರಿಯೆ ಮೂಲಕ ಮಗುವನ್ನು ಪಡೆದಿದ್ದಾರೆ. 2013ರಲ್ಲಿ ಇವರು ಮದುವೆಯಾಗಿದ್ರು. ಹಲವು ಚಿಕಿತ್ಸೆಗಳ ಬಳಿಕವೂ ಮಹಿಳೆ ಗರ್ಭಿಣಿಯಾಗಿರಲಿಲ್ಲ.
ಯಾಕಂದ್ರೆ ಆಕೆಯ ಪತಿಗೆ ಆಲಿಗೋಜೂಸ್ಪೆರ್ಮಿಯಾ ಎಂಬ ಸಮಸ್ಯೆ ಇತ್ತು. ವೀರ್ಯಾಣು ಕಡಿಮೆ ಇದ್ದಿದ್ದರಿಂದ ಪತ್ನಿ ಗರ್ಭಿಣಿಯಾಗುವುದು ಅಸಾಧ್ಯವಾಗಿತ್ತು. 2020ರಲ್ಲಿ ದಂಪತಿ ವಾರಂಗಲ್ ನಲ್ಲಿರೋ ಓಯಸಿಸ್ ಫರ್ಟಿಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಪುರುಷ ದಾನಿಯಿಂದ ವೀರ್ಯವನ್ನು ಪಡೆಯುವ ಏಕೈಕ ಆಯ್ಕೆ ಅವರ ಮುಂದಿತ್ತು. IVF ಸಂದರ್ಭದಲ್ಲಿ ಪ್ರಯೋಗಾಲಯದಲ್ಲಿ ಮಹಿಳೆಯಿಂದ ತೆಗೆದ ಎಗ್ ಅನ್ನು ಫಲವತ್ತಾಗಿಸಿ, ಅದನ್ನು ಕೆಲವು ದಿನಗಳವರೆಗೆ ಬೆಳೆಸಿ, ನಂತರ ಘನೀಕರಿಸಿ ಗರ್ಭಕೋಶದೊಳಕ್ಕೆ ಅಳವಡಿಸುತ್ತಾರೆ.
2021ರ ಮಾರ್ಚ್ 3ರಂದು ಫಲೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಯ್ತು. ಕೆಲವು ತಿಂಗಳ ನಂತರ ಮಹಿಳೆಯ ಗರ್ಭಕೋಶದಲ್ಲಿ ಅಳವಡಿಸಲು ಭ್ರೂಣವನ್ನು ಫ್ರೀಜರ್‌ನಲ್ಲಿ ಸಂರಕ್ಷಿಸಲಾಗಿತ್ತು. ಸದ್ಯದಲ್ಲೇ ತಾವು ಮಗುವನ್ನು ಹೊಂದಬಹುದೆಂಬ ಖುಷಿಯಲ್ಲಿದ್ದರು ಈ ದಂಪತಿ. ಆದ್ರೆ ದುರಂತ ನೋಡಿ, ಪತಿ ಪತ್ನಿ ಇಬ್ಬರೂ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಪತ್ನಿ ಕೆಲ ದಿನಗಳ ಬಳಿಕ ಚೇತರಿಸಿಕೊಂಡಿದ್ದಾಳೆ. ಆದ್ರೆ ಪತಿ ಕೊರೊನಾದಿಂದ ಮೃತಪಟ್ಟಿದ್ದಾರೆ.
2021ರ ಏಪ್ರಿಲ್ ಮೊದಲ ವಾರದಲ್ಲಿ ಮಹಿಳೆಯ ಪತಿ ವೈರಸ್‌ಗೆ ಬಲಿಯಾದರು. ಪತಿಯ ಸಾವಿನ ದುಃಖದ ನಡುವೆಯೂ ಆಕೆ ಮಗುವನ್ನು ಹೊಂದಲು ಬಯಸಿದ್ರು. ಫ್ರೀಝ್ ಮಾಡಿಟ್ಟಿದ್ದ ಭ್ರೂಣವನ್ನು ಮಹಿಳೆಗೆ ಅಳವಡಿಸಲು ಪತಿಯ ಒಪ್ಪಿಗೆ ಕಡ್ಡಾಯವಾಗಿದ್ದಿದ್ದರಿಂದ ಈ ಪ್ರಕ್ರಿಯೆ ನಡೆಸಲು ವೈದ್ಯರು ಹಿಂದೇಟು ಹಾಕಿದ್ದಾರೆ. 2021ರ ಜುಲೈನಲ್ಲಿ ತೆಲಂಗಾನ ಹೈಕೋರ್ಟ್ ಮೊರೆಹೋದ ಮಹಿಳೆ ಐವಿಎಫ್ ಗೆ ಅನುಮತಿ ಪಡೆದಿದ್ದಾರೆ.
ಆಗಸ್ಟ್ 3ರಂದು ಭ್ರೂಣವನ್ನು ಮಹಿಳೆಗೆ ಅಳವಡಿಸಲಾಯ್ತು. ಅದು ಸಿಗ್ರೇಡ್ ಭ್ರೂಣವಾಗಿದ್ದರಿಂದ ಮಹಿಳೆ ಗರ್ಭಧರಿಸುವ ಸಾಧ್ಯತೆ ವಿರಳವಾಗಿತ್ತು. ಆದ್ರೆ ಅದೃಷ್ಟವಶಾತ್ ಪ್ರಯೋಗ ಯಶಸ್ವಿಯಾಯ್ತು. ಮಾರ್ಚ್ 21ಕ್ಕೆ ಮಹಿಳೆ ಗಂಡು ಮಗು ಹೆತ್ತಿದ್ದಾರೆ. ಗಂಡನನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದ ಮಹಿಳೆಗೀಗ ಮಗು ಮಡಿಲು ತುಂಬಿದೆ.