ಕೊಲ್ಹಾಪುರ: ಸುಮಾರು 12 ಮಹಿಳೆಯರ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗಿದ್ದ ಅನಾದಿ ಕಾಲದಲ್ಲಿ ಜಾರಿಯಲ್ಲಿದ್ದ ವಿಧವಾ ಪದ್ಧತಿಯನ್ನು ಕೊಲ್ಹಾಪುರದ ಹೆರ್ವಾಡ ಗ್ರಾಮದ ಗ್ರಾಮ ಪಂಚಾಯಿತಿ ಸರ್ವಾನುಮತದಿಂದ ತೆಗೆದುಹಾಕಿದ್ದು, ಎಲ್ಲ ಮಹಿಳೆಯರಂತೆ ಈ ಮಹಿಳೆಯರಿಗೂ ಬದುಕಲು ಅನುವು ಮಾಡಿಕೊಡುವ ಮೂಲಕ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ.
12 ಮಹಿಳೆಯರ ಪತಿಯಂದಿರು ದೇಶವನ್ನು ತತ್ತರಿಸುವಂತೆ ಮಾಡಿದ್ದ ಕೋವಿಡ್-19 ನಿಂದಾಗಿ ಜೀವ ಕಳೆದುಕೊಂಡಿದ್ದರು. ಈ ಸಲುವಾಗಿ ಈ ಮಹಿಳೆಯರು ಬಣ್ಣದ ಬಟ್ಟೆಗಳನ್ನು ತೊಡುವಂತಿಲ್ಲ, ಒಡವೆಗಳನ್ನು ಹಾಕಿಕೊಳ್ಳುವಂತಿಲ್ಲ. ಅಲ್ಲದೇ ಕುಟುಂಬದ, ಸಂಬಂಧಿಕರ, ನೆರೆಹೊರೆಯವರ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ಕಟ್ಟಳೆ ಹೇರಲಾಗಿತ್ತು.
ಇದರಲ್ಲಿ ಕೆಲವು ಮಹಿಳೆಯರಿಗೆ ಚಿಕ್ಕ ಮಕ್ಕಳಿದ್ದಾರೆ. ಇನ್ನು ಕೆಲವರಿಗೆ ಮಕ್ಕಳಿಲ್ಲ. ಹಾಗಾಗಿ ಈ ಸತಿ ಪದ್ಧತಿ ಮಹಿಳೆಯರ ಬದುಕು ಕಿತ್ತುಕೊಳ್ಳುವುದು ಖಂಡಿತ. ಈ ನಿಟ್ಟಿನಲ್ಲಿ ಕೊಲ್ಹಾಪುರದ ಹೆರ್ವಾಡ ಗ್ರಾಮ ಪಂಚಾಯತಿ ಈ ಎಲ್ಲಾ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ನಿರ್ಧರಿಸುವ ಮೂಲಕ ಮಹಿಳೆಯರ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ.
ಈ ಕುರಿತು ಮಾತನಾಡಿರುವ ಹೆರ್ವಾಡ ಗ್ರಾಮ ಪಂಚಾಯಿತಿಯ ಸರ್ಪಂಚ್ ಹರ್ಗೊಂದಾ ಪಾಟೀಲ್, ಈ ಮಹಿಳೆಯರು ಅನಿಷ್ಟ ಪದ್ಧತಿಗೆ ಒಳಗಾಗದೇ ಎಲ್ಲ ಮಹಿಳೆಯರಂತೆ ಜೀವನ ನಡೆಸಲು ನಾವು ಇಚ್ಛಿಸುತ್ತೇವೆ. ಹಾಗಾಗಿ ಈ ವಿಧವೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು 5000 ರೂ. ಮಾಸಾಶನ ನೀಡಲಿದ್ದೇವೆ. ವಿಧವೆಯರನ್ನು ಕಡೆಗಣಿಸುವ ಅನಿಷ್ಟತೆಯನ್ನು ತೊಡೆದುಹಾಕಲು ನಿರ್ಧರಿಸಿದ್ದೇವೆ ಎಂದು ಹೇಳಿದರು.