ಜಗಳವಾಡದವರು ಯಾರೂ ಇರಲಿಕ್ಕಿಲ್ಲವೇನೋ. ಆದರೆ ಪತಿಯೊಂದಿಗೆ ಜಗಳವಾಡುವಾಗ ಈ ಕೆಲವಷ್ಟು ವಿಷಯಗಳನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಅವು ಯಾವುವು ಎಂದಿರಾ?
ಜಗಳವಾಡುವಾಗ ಒಬ್ಬರನ್ನೊಬ್ಬರು ದೂರುವುದು ಸಹಜ, ಆದರೆ ದೂರುವ ಭರದಲ್ಲಿ ಪತಿಯನ್ನು ನಿಂದಿಸದಿರಿ. ನಿಮ್ಮ ಸಮಸ್ಯೆಗೆ ಪರಿಹಾರವೂ ನಿಮ್ಮ ಮಾತಿನಲ್ಲಿರಲಿ.
ನೀನು ಸದಾ ಹೀಗೇ ಮಾಡುತ್ತಿ ಎಂದು ದೂರುವಾಗ, ನಿಮ್ಮ ಮಾತಿನಲ್ಲೇ ತಪ್ಪು ಕಂಡು ಹಿಡಿಯುತ್ತಾರೆ. ಅದರ ಬದಲು, ಇಂಥಾ ದಿನ ಇಂಥ ಅವಧಿಯಲ್ಲಿ ನೀನು ಹೀಗೆ ಮಾಡಿದ್ದಿ ಎಂಬುದನ್ನು ಸ್ಪಷ್ಟವಾಗಿ ಹೇಳಿಬಿಡಿ.
ಮಾತಿನಲ್ಲಿ ನೀನು ಎಂಬ ಪದ ಮಾತ್ರ ಬಳಕೆಯಾಗುತ್ತಲೇ ಬೈಸಿಕೊಳ್ಳುವ ವ್ಯಕ್ತಿ ಜಾಗ್ರತನಾಗಿ ಸ್ವ ರಕ್ಷಣೆಗೆ ಮುಂದಾಗುತ್ತಾನೆ. ಅದರೊಂದಿಗೆ ನಾನೂ ಎಂಬ ಪದವನ್ನು ಸೇರಿಸಿ. ನೀನು ಹಾಗೆ ಹೇಳಿದ್ದು ನನಗೆ ಇಷ್ಟವಾಗಲಿಲ್ಲ ಎನ್ನಿ. ನೀನು ಸದಾ ಹಾಗೇ ಹೇಳುತ್ತಿ ಎಂದು ದೂರಬೇಡಿ. ನಿಮ್ಮ ಸಮಸ್ಯೆಗಳತ್ತಲೂ ಅವರ ಗಮನ ಹೋಗಲಿ.
ಸಿಟ್ಟಿನಿಂದ ಜಗಳವಾಡಲು ಆರಂಭಿಸಿದರೆ ನಿಮಗೆ ತಲುಪಿಸಬೇಕಾದ ಸಂಗತಿಯೇ ಮರೆತು ಹೋಗಬಹುದು. ದೀರ್ಘ ಉಸಿರನ್ನು ತೆಗೆದುಕೊಂಡು ಸ್ಪಷ್ಟವಾಗಿ ಯೋಚಿಸಿ ಮಾತನಾಡಿ.