ಪತಿಯಿಂದ ದೂರವಾಗಿರುವ ಗರ್ಭಿಣಿಗೆ ಕೇರಳ ಹೈಕೋರ್ಟ್ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಿದೆ. ಮಹಿಳೆ 21 ವಾರಗಳ ಗರ್ಭಿಣಿಯಾಗಿದ್ದಾಳೆ. ನ್ಯಾಯಮೂರ್ತಿ ವಿಜಿ ಅರುಣ್, ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯಕೀಯ ಗರ್ಭಪಾತ ಕಾಯಿದೆ (ಎಂಟಿಪಿ ಆಕ್ಟ್) ಅಡಿಯಲ್ಲಿ ಗಂಡನ ಒಪ್ಪಿಗೆಯ ಅಗತ್ಯವಿಲ್ಲ ಎಂದು ಒತ್ತಿ ಹೇಳಿದರು.
ವಿಧವೆ ಅಥವಾ ವಿಚ್ಛೇದಿತೆಗೆ ಈ ಕಾಯಿದೆಯಲ್ಲಿ ಗರ್ಭಪಾತಕ್ಕೆ ಪತಿಯ ಅನುಮತಿ ಪಡೆಯುವ ಅಗತ್ಯವಿಲ್ಲ. ಗರ್ಭಿಣಿ ಕಾನೂನು ಬದ್ಧವಾಗಿ ವಿಚ್ಛೇದನ ಪಡೆಯದಿದ್ದರೂ ಅಥವಾ ವಿಧವೆಯಾಗಿರದಿದ್ದರೂ ಸಹ, ಪತಿಯೊಂದಿಗೆ ಆಕೆಯ ಬದಲಾದ ಸಮೀಕರಣವನ್ನು ನ್ಯಾಯಾಲಯ ಗಮನಿಸಿದೆ. ಪತಿಯಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳ ಅನುಭವಿಸಿದ ಮಹಿಳೆ ಆತನ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾಳೆ.
ಅವಳ ವೈವಾಹಿಕ ಜೀವನದಲ್ಲಿ ತೀವ್ರವಾದ ಬದಲಾವಣೆಗೆ ಆಗಿರುವುದರಿಂದ ಕೋರ್ಟ್ ಗರ್ಭಪಾತವನ್ನು ಪರಿಗಣಿಸಿದೆ. ಸಂತಾನೋತ್ಪತ್ತಿ ಆಯ್ಕೆ ಮಾಡುವ ಮಹಿಳೆಯ ಹಕ್ಕು, ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಆಯಾಮವಾಗಿದೆ. ಇದನ್ನು ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಅರ್ಥೈಸಿಕೊಳ್ಳಲಾಗಿದೆ. ಸಂತಾನೋತ್ಪತ್ತಿಗೆ ಸಮ್ಮತಿಸಲು ಅಥವಾ ಅದನ್ನು ತ್ಯಜಿಸುವ ಆಯ್ಕೆ ಆಕೆಗಿದೆ ಎಂದು ಕೋರ್ಟ್ ಹೇಳಿದೆ.
‘ವಿಚ್ಛೇದನ’ ಪದವು ಗರ್ಭಪಾತಕ್ಕೆ ಯಾವುದೇ ರೀತಿಯಲ್ಲಿ ಅರ್ಹತೆ ಒದಗಿಸಲು ಅಥವಾ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. 21 ವರ್ಷದ ಗರ್ಭಿಣಿ, 21 ವಾರಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದಳು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶವನ್ನು ನೀಡಿದೆ. ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮಹಿಳೆ ಬಸ್ ಕಂಡಕ್ಟರ್‌ನನ್ನು ಮದುವೆಯಾಗಿದ್ದಳು. ಮದುವೆಯ ನಂತರ ಆತ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ, ಇನ್ನಿಲ್ಲದ ಹಿಂಸೆ ಕೊಡಲಾರಂಭಿಸಿದ್ದ.
ಅಷ್ಟೇ ಅಲ್ಲ ಗರ್ಭದಲ್ಲಿರುವ ಮಗುವಿನ ತಂದೆ ಯಾರೆಂದು ಪ್ರಶ್ನಿಸಿದ್ದ, ಮಹಿಳೆಗೆ ಭಾವನಾತ್ಮಕ ಬೆಂಬಲ ನೀಡಲು ನಿರಾಕರಿಸಿದ್ದ. ಇದರಿಂದ ನೊಂದ ಮಹಿಳೆ ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯರ ಬಳಿ ತೆರಳಿದ್ಲು. ಆದ್ರೆ ಪತಿಯಿಂದ ವಿಚ್ಛೇದನ ಪಡೆದಿದ್ದಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ವೈದ್ಯರು ಅಬಾರ್ಷನ್ ಮಾಡಲು ನಿರಾಕರಿಸಿದ್ರು. ನಂತರ ಆಕೆ ಗಂಡನ ವಿರುದ್ಧ ಪೊಲೀಸರಿಗೆ ಕೊಟ್ಟಿದ್ದಾಳೆ. ಕೋರ್ಟ್ ಮೊರೆಹೋಗುವಂತೆ ವೈದ್ಯರೂ ಸೂಚಿಸಿದ್ದರಿಂದ ಗರ್ಭಪಾತಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ಲು. ಮಹಿಳೆ ಸಮಾಜದ ದುರ್ಬಲ ವರ್ಗಕ್ಕೆ ಸೇರಿದವಳು, ಮಗುವನ್ನು ಸ್ವಂತವಾಗಿ ಬೆಳೆಸುವ ಆರ್ಥಿಕ ಸಾಮರ್ಥ್ಯವನ್ನು ಹೊಂದಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಆಕೆಗೆ ಅನುಮತಿ ನೀಡಿದೆ.