41 ವರ್ಷದ ವ್ಯಕ್ತಿಯೊಬ್ಬ ತನ್ನ ಗರ್ಲ್ಫ್ರೆಂಡ್ ಜೊತೆಯಲ್ಲಿ ಹೋಟೆಲ್ನಲ್ಲಿ ಚೆಕ್ ಇನ್ ಮಾಡಲು ಪತ್ನಿಯ ಆಧಾರ್ ಕಾರ್ಡ್ ಬಳಕೆ ಮಾಡಿದ್ದು ಈ ಸಂಬಂಧ ಆರೋಪಿ ಹಾಗೂ ಆತನ ಗರ್ಲ್ಫ್ರೆಂಡ್ ವಿರುದ್ಧ ವಂಚನೆಯ ಪ್ರಕರಣ ದಾಖಲಾಗಿದೆ.
ಇಬ್ಬರ ವಿರುದ್ಧ ಪುಣೆಯ ಹಿಂಜೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿಯು ಗುಜರಾತ್ ಮೂಲದ ಉದ್ಯಮಿಯಾಗಿದ್ದು, ಆತನ ಪತ್ನಿ ಕಂಪನಿಯೊಂದರಲ್ಲಿ ನಿರ್ದೇಶಕಿಯಾಗಿದ್ದಾರೆ ಎನ್ನಲಾಗಿದೆ.
ಪತಿಯ ಮೇಲೆ ಅನುಮಾನ ಹೊಂದಿದ್ದ ಪತ್ನಿಯು ತನ್ನ ಪತಿಯ ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದರು. ಇದರಿಂದಾಗಿ ಪತಿಯು ತನಗೆ ವಂಚಿಸಿದ್ದಾನೆ ಎಂಬ ವಿಚಾರ ಪತ್ನಿಗೆ ಸಾಕ್ಷಿ ಸಮೇತ ದೊರಕಿದಂತಾಗಿದೆ.
ಮಹಿಳೆಯು ತನ್ನ ಪತಿಯ ಎಕ್ಸ್ಯುವಿ ಕಾರಿಗೆ ಜಿಪಿಎಸ್ ಟ್ಯ್ಯಾಕರ್ ಅಳವಡಿಸಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಬ್ಯುಸಿನೆಸ್ ಟ್ರಿಪ್ಗೆ ಬೆಂಗಳೂರಿಗೆ ಹೋಗುತ್ತೇನೆ ಎಂದಿದ್ದ ಪತಿಯು ಪುಣೆಯಲ್ಲಿ ಇರುವುದು ಜಿಪಿಎಸ್ ಮೂಲಕ ಪತ್ನಿಗೆ ತಿಳಿದಿತ್ತು.
ಹೋಟೆಲ್ಗೆ ಕರೆ ಮಾಡಿ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ, ಉದ್ಯಮಿಯು ತನ್ನ ಪತ್ನಿಯೊಂದಿಗೆ ಹೋಟೆಲ್ನಲ್ಲಿ ಚೆಕ್ ಇನ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ ವೇಳೆಯಲ್ಲಿ ಈತ ಬೇರೊಂದು ಮಹಿಳೆಯ ಜೊತೆಯಲ್ಲಿ ಹೋಟೆಲ್ಗೆ ತೆರಳಿರುವ ವಿಚಾರ ಬಟಾಬಯಲಾಗಿದೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಉದ್ಯಮಿಯು ಪತ್ನಿಯ ಆಧಾರ್ ಕಾರ್ಡ್ ದುರ್ಬಳಕೆ ಮಾಡಿರುವ ವಿಚಾರ ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 419 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.