
ಪಶ್ಚಿಮ ಬಂಗಾಳದ ಬಂಕುರಾದ ವ್ಯಕ್ತಿಯೊಬ್ಬರು ಸರ್ಕಾರಿ ಅಧಿಕಾರಿಗಳ ಗಮನ ಸೆಳೆಯಲು ಒಂದು ವಿಶಿಷ್ಟವಾದ ]ಮಾರ್ಗವನ್ನು ಅನುಸರಿಸಿದ್ದಾರೆ. ರೇಷನ್ ಕಾರ್ಡ್ ನಲ್ಲಿ ತಮ್ಮ ಹೆಸರನ್ನು ಮೂರನೇ ಬಾರಿಯೂ ಸರಿ ಮಾಡದ ಅಧಿಕಾರಿಗಳ ವಿರುದ್ಧ ಬೇಸತ್ತು , ಅಧಿಕಾರಿಗಳ ಮುಂದೆ ನಾಯಿಯಂತೆ ಬೊಗಳಿ ತಮ್ಮ ಬೇಸರ ವ್ಯಕ್ತಪಡಿಸುವ ಮೂಲಕ ಪ್ರತಿಭಟಿಸಿದ್ದಾರೆ.
ಪಡಿತರ ಚೀಟಿಯಲ್ಲಿ ಶ್ರೀಕಂಠಿ ದತ್ತಾ ಎಂಬುದಕ್ಕೆ ಬದಲಾಗಿ ಶ್ರೀಕಂಠಿ ಕುತ್ತಾ ಎಂದು ಬರೆಯಲಾಗಿದೆ ಎಂದು ಫಿರ್ಯಾದುದಾರ ಶ್ರೀಕಂಠಿ ದತ್ತಾ ತಿಳಿಸಿದ್ದಾರೆ. ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿಗೆ ಮೂರು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಆದರೆ ಮೂರನೆಯ ಬಾರಿಯೂ ನನ್ನ ಹೆಸರನ್ನು “ಶ್ರೀಕಂಠಿ ದತ್ತಾ ಬದಲಿಗೆ ಶ್ರೀಕಂಠಿ ಕುತ್ತಾ” ಎಂದು ಬರೆಯಲಾಗಿದೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ ಎಂದು ಶ್ರೀಕಾಂಠಿ ದತ್ತಾ ಹೇಳಿದ್ದಾರೆ.
ನಿನ್ನೆ ಮತ್ತೆ ಕರೆಕ್ಷನ್ ಗೆ ಅರ್ಜಿ ಹಾಕಲು ಹೋಗಿ ಅಲ್ಲಿ ಜಾಯಿಂಟ್ ಬಿಡಿಒ ಅವರನ್ನು ನೋಡಿ ಅವರ ಮುಂದೆ ನಾಯಿಯಂತೆ ವರ್ತಿಸತೊಡಗಿದೆ. ಅವರು ನನ್ನ ಪ್ರಶ್ನೆಗೆ ಪ್ರತಿಕ್ರಿಯಿಸಲಿಲ್ಲ ಮತ್ತು ಓಡಿಹೋದರು. ನಮ್ಮಂತಹ ಸಾಮಾನ್ಯ ಜನರು ಕೆಲಸ ಬಿಟ್ಟು ಎಷ್ಟು ಬಾರಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಹೋಗುತ್ತಾರೆ? ಎಂದು ಶ್ರೀಕಂಠಿ ದತ್ತಾ ಪ್ರಶ್ನಿಸಿದ್ದಾರೆ.