ಪಟ್ಟದಕಲ್ಲು ವಿರೂಪಾಕ್ಷ ದೇವಾಲಯದ ದಕ್ಷಿಣ ಭಾಗದಲ್ಲಿ ಮುಖೇಶ್ವರನಿಗಾಗಿ ನಿರ್ಮಿಸಿರುವುದೇ ಪಾಪನಾಥೇಶ್ವರ ದೇವಾಲಯ. ಇದನ್ನು ಕ್ರಿ.ಶ. 740 ರಲ್ಲಿ ನಿರ್ಮಾಣ ಮಾಡಲಾಯಿತು ಎಂದು ತಿಳಿದು ಬಂದಿದೆ.
ದೇವಾಲಯದ ಒಳಭಾಗದ ಪ್ರವೇಶ ದ್ವಾರದಲ್ಲಿ ನಂದಿ ಹಾಗೂ ವೀರಭದ್ರನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಪ್ರಮುಖ ಮಹಾಮಂಟಪದ ಮೇಲ್ಛಾವಣಿಯನ್ನು 16 ಕಂಬಗಳ ಸಹಾಯದಿಂದ ನಿಲ್ಲಿಸಿರುವುದು ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುವ ಸಂಗತಿಯಾಗಿದೆ.
ಕಂಬಗಳ ಮೇಲೆ ಹಾಗೂ ಗೋಡೆಗಳ ಮೇಲೆ ಸ್ತ್ರೀಯರ ಹಾಗೂ ದಂಪತಿಯರ ರತಿವಿಲಾಸದ ಚಿತ್ರಗಳನ್ನು ಕೆತ್ತಲಾಗಿದೆ. ದೇವಾಲಯದ ಅರ್ಧ ಮಂಟಪದ ಮೇಲ್ಛಾವಣಿಯಲ್ಲಿ ಸಂಗೀತಗಾರರ ನಡುವೆ ಶಿವ ಹಾಗೂ ಪಾರ್ವತಿಯರ ವಿಗ್ರಹಗಳಿವೆ. ಹಿಂದು ಪುರಾಣ ಹಾಗೂ ರಾಮಾಯಣದ ಕಥೆಗಳ ಪ್ರಮುಖ ಚಿತ್ರಣಗಳನ್ನು ಇಲ್ಲಿ ನಿರ್ಮಿಸಿರುವುದು ವಿಶೇಷ.
ಈ ದೇವಾಲಯದ ಪ್ರವೇಶ ಸ್ಥಳದಲ್ಲಿ ಪುರಾತನ ಕಕ್ಷಾಸನ, ಸಭಾ-ಮಂಟಪ, ಅರ್ಧ-ಮಂಟಪ ಹಾಗೂ ಪವಿತ್ರ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಲು ನಿರ್ಮಿಸಿರುವ ಮಾರ್ಗವಿದೆ. ಇಲ್ಲಿನ ಸಭಾ-ಮಂಟಪದಲ್ಲಿ ನಂದಿಯ ದೊಡ್ಡ ಹಾಗೂ ವಿಶೇಷವಾದ ಚಿತ್ರವಿದೆ. ಪಟ್ಟದಕಲ್ಲಿನಲ್ಲಿರುವ ಈ ದೇವಾಲಯ ನೋಡಲೇಬೇಕಾದ ಸ್ಥಳ ಎಂಬುದಕ್ಕೆ ಇಲ್ಲಿನ ಚಿತ್ರಕಲೆ ಹಾಗೂ ವಾಸ್ತುಶಿಲ್ಪಗಳೇ ಸಾಕ್ಷಿ.