ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ನವೆಂಬರ್ 23ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪರಿಷತ್ ಚುನಾವಣೆಗೆ ನ.23ರಂದು ನಾಮಪತ್ರ ಸಲ್ಲಿಸುತ್ತಿದ್ದು, ಕಾಂಗ್ರೆಸ್ ನವರನ್ನು ಸಹಕಾರ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಶ್ಲಾಘಿಸಿದ ವಾಟಾಳ್ ನಾಗರಾಜ್, ಸಿದ್ದರಾಮಯ್ಯ ಪ್ರಬುದ್ಧ ರಾಜಕಾರಣಿ. ಡಿ.ಕೆ.ಶಿವಕುಮಾರ್ ಕೂಡ ನನಗೆ ಬೇಕಾದವರು. ಇಬ್ಬರ ಸಹಕಾರ ಕೂಡ ನನಗೆ ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದರು.
ಕಾಂಗ್ರೆಸ್ ನಾಯಕರು ನನಗೆ ಬೆಂಬಲ ನೀಡಿದರೆ ಇಬ್ಬರಿಗೂ ಅನುಕೂಲವಾಗಲಿದೆ. ಹೀಗಾಗಿ ಪರಿಷತ್ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳೇ ಮತದಾರರಾಗಿರುತ್ತಾರೆ. ಎರಡು ಮತ ಚಲಾವಣೆಗೆ ಅವಕಾಶವಿದೆ. ನನಗೊಂದು ಮತ ಕೊಡಿ ಉಳಿದೊಂದು ಮತವನ್ನು ಬೇರೆ ಯಾರಿಗೆ ಬೇಕಾದರೂ ಚಲಾಯಿಸಿ. ನನ್ನಂಥವರು ಸದನದಲ್ಲಿ ಇರಬೇಕು ಎಂದು ಮನವಿ ಮಾಡಿದರು.