ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದು, ಪ್ರಮೋದ್ ಮುತಾಲಿಕ್ ಬಳಿ 10,500 ರೂಪಾಯಿ ನಗದು, ಬ್ಯಾಂಕ್ ಖಾತೆಯಲ್ಲಿ 3 ಸಾವಿರ ರೂಪಾಯಿ ಹಾಗೂ ಅಂಚೆ ಇಲಾಖೆಯ ರಾಷ್ಟ್ರೀಯ ಉಳಿತಾಯ ಯೋಜನೆ ಬಾಂಡ್ ನಲ್ಲಿ 2.50 ಲಕ್ಷ ರೂಪಾಯಿ ಠೇವಣಿ ಸೇರಿದಂತೆ ಒಟ್ಟು 2.63 ಲಕ್ಷ ರೂಪಾಯಿಗಳನ್ನು ಹೊಂದಿದ್ದಾರೆ.
ಇನ್ನು ಪ್ರಮೋದ್ ಮುತಾಲಿಕ್ ಯಾವುದೇ ಆಸ್ತಿ, ಸ್ವಂತ ವಾಹನ ಹೊಂದಿಲ್ಲ. ಹಾಗೆಯೇ ಸಾಲವನ್ನು ಸಹ ಮಾಡಿಲ್ಲ. ಜನರು ಕೊಟ್ಟ ದೇಣಿಗೆಯೇ ತಮ್ಮ ಆದಾಯದ ಮೂಲ ಎಂದು ಅವಿವಾಹಿತರಾಗಿರುವ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಹಾಗೆ ಪ್ರಮೋದ್ ಮುತಾಲಿಕ್ ಅವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಏಳು ಅಪರಾಧ ಪ್ರಕರಣಗಳು ಇದ್ದು, ಯಾದಗಿರಿ ನಗರ, ಶೃಂಗೇರಿ, ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆ, ಬಬಲೇಶ್ವರ, ನವನಗರ, ಜೇವರ್ಗಿ ಹಾಗೂ ಮುರುಡೇಶ್ವರ ಠಾಣೆಗಳಲ್ಲಿ ದಾಖಲಾಗಿವೆ.