ರಾಷ್ಟ್ರ ರಾಜಧಾನಿಯಲ್ಲಿ ಪಕ್ಷಿಗಳನ್ನು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ದೆಹಲಿಯ ಅಶೋಕ್ ವಿಹಾರ ಪ್ರದೇಶದ ನಿವಾಸಿಯೊಬ್ಬರು ತಮ್ಮ ಜೀವಮಾನದುದ್ದಕ್ಕೂ 2.5 ಲಕ್ಷಕ್ಕೂ ಅಧಿಕ ಗೂಡುಗಳನ್ನು ನಿರ್ಮಿಸಿದ್ದಾರೆ. ಇದೇ ಕಾರಣಕ್ಕಾಗಿ ಇವರಿಗೆ ನೆಸ್ಟ್ ಮ್ಯಾನ್ ಎಂಬ ಬಿರುದು ಕೂಡ ಸಿಕ್ಕಿದೆ.
ನೆಸ್ಟ್ ಮ್ಯಾನ್ ಎಂದೇ ಹೆಚ್ಚು ಚಿರಪರಿಚಿತರಾಗಿರುವ ರಾಕೇಶ್ ಖಾತ್ರಿ ಜನರಿಗೆ ಗೂಡುಗಳನ್ನು ರಚಿಸಲು ಕಲಿಸುತ್ತಾರೆ. ಹಾಗೂ ಇದುವರೆಗೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ. ಈ ರೀತಿ ಪಕ್ಷಿಗಳಿಗೆ ಆಶ್ರಯ ಕಲ್ಪಿಸುತ್ತಿರುವ ರಾಕೇಶ್ ಖಾತ್ರಿಯ ಮಾನವೀಯ ಕಾರ್ಯಕ್ಕೆ ಮೆಚ್ಚಿ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಅವರ ಮುಡಿಗೇರಿವೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರಾಕೇಶ್ ಖಾತ್ರಿ, ನನಗೆ ಬಾಲ್ಯದಿಂದಲೂ ಪಕ್ಷಿಗಳ ಜೊತೆ ಕಾಲ ಕಳೆಯುವುದು ಅಂದರೆ ತುಂಬಾನೇ ಇಷ್ಟದ ಕೆಲಸವಾಗಿತ್ತು. ಅಂದಿನಿಂದ ಅವುಗಳಿಗೆ ಗೂಡನ್ನು ನಿರ್ಮಿಸಲು ಆರಂಭಿಸಿದೆ. ನಾನು ನನ್ನ ಜೀವನದಲ್ಲಿ ಇಲ್ಲಿಯವರೆಗೆ 2.5 ಲಕ್ಷಕ್ಕೂ ಅಧಿಕ ಗೂಡುಗಳನ್ನು ನಿರ್ಮಿಸಿದ್ದೇನೆ.
ನಾನು ಲಕ್ಷಗಟ್ಟಲೇ ವಿದ್ಯಾರ್ಥಿಗಳಿಗೆ ಹಕ್ಕಿ ಗೂಡು ಕಟ್ಟುವುದನ್ನು ಕಲಿಸಿದ್ದೇನೆ. ಆರಂಭದಲ್ಲಿ ಜನರು ನನ್ನನ್ನು ಗೇಲಿ ಮಾಡುತ್ತಿದ್ದರು. ಆದರೆ ನಾನು ನನ್ನ ಪ್ರಯತ್ನವನ್ನು ಮುಂದುವರಿಸಿದೆ. ನನ್ನ ಈ ಕಾರ್ಯಕ್ಕೆ ಈಗಾಗಲೇ ಐದು ಪ್ರಶಸ್ತಿಗಳು ಬಂದಿವೆ. ಲಿಮ್ಕಾ ಬುಕ್ನಲ್ಲಿಯೂ ನನ್ನ ಹೆಸರು ಸೇರ್ಪಡೆಯಾಗಿದೆ ಎಂದು ಹೇಳಿದರು.