ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕ ಹೆಚ್ಚಳವಾಗುತ್ತಿದೆ.
ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದ್ದು, ಆಸ್ಪತ್ರೆಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಪಂಜಾಬ್ ನಲ್ಲಿ ಕೂಡ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿ ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಹೆಚ್ಚಾಗುತ್ತಿದೆ.
ಸದ್ಯದ ಮಾಹಿತಿಯಂತೆ ಪಂಜಾಬ್ ರಾಜ್ಯದಲ್ಲಿ 264 ಜನ ರೋಗಿಗಳಿಗೆ ಆಕ್ಸಿಜನ್ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಈ ರೋಗಿಗಳ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಂಜಾಬ್ ನಲ್ಲಿ ಜನವರಿ 1ರಂದು 23 ರೋಗಿಗಳು ಆಕ್ಸಿಜನ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂಖ್ಯೆ ಸದ್ಯ 264ಕ್ಕೆ ಏರಿದೆ. ಆದರೆ, ಕಳೆದ 24 ಗಂಟೆಗಳಲ್ಲಿಯೇ 226 ರೋಗಿಗಳಿಗೆ ಆಕ್ಸಿಜನ್ ನ ಅವಶ್ಯಕತೆ ಎದರಾಗಿದ್ದು, ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಸೃಷ್ಟಿಸುತ್ತಿದೆ.
ಪಂಜಾಬ್ ನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯತ್ತ ಮುಖ ಮಾಡಿದೆ. ಶುಕ್ರವಾರ 2,901ರಷ್ಟಿದ್ದ ಸೋಂಕಿತರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ 3,643ರಷ್ಟು ದಾಖಲಾಗಿದೆ. ಸೋಂಕಿತರ ಸಂಖ್ಯೆ ಹಾಗೂ ಆಕ್ಸಿಜನ್ ಬೇಡಿಕೆ ಹೆಚ್ಚಾಗುತ್ತಿರುವುದರಿಂದಾಗಿ ಆತಂಕ ಮನೆ ಮಾಡುತ್ತಿದೆ.
ಅಲ್ಲಿ ರಾಜ್ಯದ ಪಾಸಿಟಿವಿಟಿ ದರ ಕೂಡ ಭಾನುವಾರಕ್ಕೆ ಶೇ. 14.64ರಷ್ಟು ಏರಿಕೆ ಕಂಡಿದೆ. ಪಟಿಯಾಲ, ಮೊಹಾಲಿ, ಲುಧಿಯಾನ, ಅಮೃತಸರದಲ್ಲಿ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಇದರ ಮಧ್ಯೆಯೇ ಪಂಜಾಬ್ ನಲ್ಲಿ ಚುನಾವಣೆ ಘೋಷಣೆಯಾಗಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸುತ್ತಿದ್ದಾರೆ.