ಪಂಜಾಬ್ನ ಪ್ರಸಿದ್ಧ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆಯಾಗಿ 40 ದಿನಗಳ ಬಳಿಕ ಶಾಕಿಂಗ್ ವಿಡಿಯೋ ಒಂದು ವೈರಲ್ ಆಗಿದೆ. ಸಿಧು ಹತ್ಯೆ ಮಾಡಿದ ದುಷ್ಕರ್ಮಿಗಳು ಬಂದೂಕು ತೋರಿಸುತ್ತ ಈ ವಿಡಿಯೋದಲ್ಲಿ ಸಂಭ್ರಮಿಸಿದ್ದಾರೆ. ಸಿಧು ಹತ್ಯೆಯಲ್ಲಿ ಭಾಗಿಯಾಗಿದ್ದ 19 ವರ್ಷದ ಶೂಟರ್ ಅಂಕಿತ್ ಸಿರ್ಸಾ ಎಂಬ ಆರೋಪಿಯ ಮೊಬೈಲ್ನಲ್ಲಿ ಈ ವಿಡಿಯೋ ಪತ್ತೆಯಾಗಿದೆ.
ಹಂತಕ ಅಂಕಿತ್ ಈ ವೀಡಿಯೊಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ. ಅದನ್ನೀಗ ಡಿಲೀಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಎಲ್ಲಾ ಐವರು ಹಂತಕರಿದ್ದಾರೆ. ಅಂಕಿತ್ ಸಿರ್ಸಾ, ಸಚಿನ್ ಭಿವಾನಿ, ಪ್ರಿಯವ್ರತ್, ದೀಪಕ್ ಮತ್ತು ಕಪಿಲ್ ಕೊಲೆಯ ನಂತರ ಜೀಪಿನಲ್ಲಿ ಜೋರಾಗಿ ಪಂಜಾಬಿ ಹಾಡು ಹಾಕಿಕೊಂಡು ಸಂಭ್ರಮಿಸಿದ್ದಾರೆ.
ಸಿಧುವನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಸಿಧುವನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಪಂಜಾಬ್ ಸರ್ಕಾರ ಮೂಸೆವಾಲಾ ಸೇರಿದಂತೆ 424 ವಿಐಪಿಗಳ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಈ ಹತ್ಯೆ ನಡೆದಿತ್ತು.
ನಿನ್ನೆ ಬಂಧನಕ್ಕೊಳಗಾಗಿರುವ ಆರೋಪಿ ಅಂಕಿತ್ ಸಿರ್ಸಾ, ಸಿಧು ಮೇಲೆ ಎರಡು ಪಿಸ್ತೂಲ್ಗಳಿಂದ ಕನಿಷ್ಠ ಆರು ಸುತ್ತು ಗುಂಡು ಹಾರಿಸಿದ್ದಾನೆ. ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿರುವ ಅತ್ಯಂತ ಕಿರಿಯ ಶೂಟರ್ ಇವನು. ಅಂಕಿತ್ ಸಿರ್ಸಾ ಪಿಸ್ತೂಲ್ಗಳನ್ನು ಝಳಪಿಸುತ್ತಿರುವ ಫೋಟೋಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಫೋಟೋವೊಂದರಲ್ಲಿ ಆತ ತನ್ನ ಎರಡೂ ಕೈಗಳಲ್ಲಿ ಪಿಸ್ತೂಲ್ ಇಟ್ಟುಕೊಂಡು ಪೋಸ್ ಕೊಟ್ಟಿದ್ದಾನೆ.
ಮತ್ತೊಂದು ಫೋಟೋದಲ್ಲಿ ಪಿಸ್ತೂಲ್ ಅನ್ನು “ಮೂಸೆವಾಲಾ” ಎಂಬುದರ ಮೇಲೆ ಗುರಿಯಿಟ್ಟಿದ್ದಾನೆ. ಅಂಕಿತ್ ಸಿರ್ಸಾ, ಪ್ರಮುಖ ಶೂಟರ್ ಪ್ರಿಯವ್ರತ್ ಅಲಿಯಾಸ್ ಫೌಜಿಯ ಆಪ್ತ ಸಹಾಯಕ. ಜೂನ್ 19 ರಂದು ಪ್ರಿಯವತ್ನನ್ನು ಸಹ ಬಂಧಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ತಂಡ ಸಚಿನ್ ಭಿವಾನಿಯನ್ನೂ ಅರೆಸ್ಟ್ ಮಾಡಿದೆ. ಸಿರ್ಸಾ ಮತ್ತು ಭಿವಾನಿ ಇಬ್ಬರೂ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ನ ಸದಸ್ಯರು ಅನ್ನೋದು ಬಹಿರಂಗವಾಗಿದೆ.
ಸಿರ್ಸಾ ಮತ್ತು ಭಿವಾನಿ ಬಳಿಯಿಂದ 9 ಎಂಎಂ ಪಿಸ್ತೂಲ್, 10 ಲೈವ್ ಕಾರ್ಟ್ರಿಡ್ಜ್ಗಳು, 30 ಎಂಎಂ ಪಿಸ್ತೂಲ್, ಒಂಬತ್ತು ಲೈವ್ ಕಾರ್ಟ್ರಿಡ್ಜ್ಗಳು, ಮೂರು ಪಂಜಾಬ್ ಪೊಲೀಸ್ ಸಮವಸ್ತ್ರಗಳು, ಎರಡು ಮೊಬೈಲ್ ಹ್ಯಾಂಡ್ಸೆಟ್ಗಳು, ಡಾಂಗಲ್ ಮತ್ತು ಸಿಮ್ ಕಾರ್ಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.