ಗೋವಾ, ಉತ್ತರ ಪ್ರದೇಶ ಹಾಗೂ ಮಣಿಪುರಗಳಲ್ಲಿ ನೋಟಾಗೆ ಸಿಕ್ಕ ಮತಗಳಿಗಿಂತಲೂ ಕಡಿಮೆ ಮತವನ್ನು ಶಿವಸೇನೆ ಸಂಪಾದಿಸಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳಿವೆ.
ಮಹಾರಾಷ್ಟ್ರದಲ್ಲಿ ಎನ್ಸಿಪಿ ಹಾಗೂ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿರುವ ಶಿವಸೇನೆ ಈ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿತ್ತು. ಆದರೆ ಶಿವಸೇನೆಯ ಓರ್ವ ಅಭ್ಯರ್ಥಿ ಕೂಡ ನಿನ್ನೆಯ ಚುನಾವಣಾ ಫಲಿತಾಂಶದ ಬಳಿಕ ವಿಜಯದ ಮಾಲೆಯನ್ನು ಹಾಕಿಕೊಂಡಿಲ್ಲ. ಗೋವಾದಲ್ಲಿ 10 ಮಂದಿ ಅಭ್ಯರ್ಥಿಗಳು ಶಿವಸೇನೆಯಿಂದ ಸ್ಪರ್ಧಿಸಿದ್ದು ಪ್ರತಿಯೊಬ್ಬರೂ ಠೇವಣಿಯನ್ನು ಕಳೆದುಕೊಂಡಿದ್ದಾರೆ.
ಕೊರ್ಟಾಲಿಮ್ (55 ಮತಗಳು), ಕ್ವಿಪೆಮ್ (66), ವಾಸ್ಕೋ-ಡ-ಗಾಮಾ (71) ಮತ್ತು ಸ್ಯಾಂಕ್ವೆಲಿಮ್ (99) ನಲ್ಲಿ ಸೇನಾ ಅಭ್ಯರ್ಥಿಗಳು 100 ಕ್ಕಿಂತ ಕಡಿಮೆ ಮತಗಳನ್ನು ಪಡೆದರು.
ಗೋವಾದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ನೋಟಾ ಆಯ್ಕೆಯು 1.12 ಪ್ರತಿಶತವನ್ನು ಗಳಿಸಿದರೆ, ಸೇನೆಯು ಕೇವಲ 0.18 ಶೇಕಡಾ ಮತಗಳನ್ನು ಗಳಿಸಿತು.
ಮಣಿಪುರದಲ್ಲಿ ಶಿವಸೇನೆ ಆರು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈಶಾನ್ಯ ರಾಜ್ಯದಲ್ಲಿ ನೋಟಾ ಶೇಕಡಾ 0.54 ಮತಗಳನ್ನು ಗಳಿಸಿದರೆ, ಸೇನೆಯು ಶೇಕಡಾ 0.34 ರಷ್ಟು ಮತಗಳನ್ನು ಗಳಿಸಿತು.
ಉತ್ತರ ಪ್ರದೇಶದಲ್ಲಿ ಶಿವಸೇನೆ ಶೇ.0.03ರಷ್ಟು ಮತಗಳನ್ನು ಪಡೆದಿದ್ದರೆ, ನೋಟಾ ಶೇ.0.69ರಷ್ಟು ಮತಗಳನ್ನು ಗಳಿಸಿದೆ.