ಕೊರೊನಾ ಲಸಿಕೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಮುದ್ರಿಸಲಾಗುತ್ತಿದ್ದು, ಇದಕ್ಕೆ ವಿಪಕ್ಷಗಳ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಕೆಲವರು ಭಾವಚಿತ್ರ ಮುದ್ರಣದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಸಹ ಅದಕ್ಕೆ ಮನ್ನಣೆ ಸಿಕ್ಕಿರಲಿಲ್ಲ.
ಇದರ ಮಧ್ಯೆ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ಉತ್ತರಕಾಂಡ, ಮಣಿಪುರ, ಪಂಜಾಬ್ ಮತ್ತು ಗೋವಾಗಳಲ್ಲಿ ಕೋವಿಡ್ ಲಸಿಕೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಮುದ್ರಣ ಮಾಡಲಾಗುತ್ತಿರಲಿಲ್ಲ.
ಇದೀಗ 5 ರಾಜ್ಯಗಳ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು ಫಲಿತಾಂಶವೂ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಈ ರಾಜ್ಯಗಳ ಪ್ರಮಾಣ ಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಮುದ್ರಿಸುವ ನಿರ್ಧಾರ ಕೈಗೊಂಡಿದೆ.