2008ನೇ ಇಸವಿಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋವನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಮನೆಗಳಿಗೆ ಕಾರುಗಳನ್ನು ಕೈಗೆಟುಕುವಂತೆ ಮಾಡಿತು. ಕೈಗೆಟುಕುವ ಕಾರುಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ ನ್ಯಾನೋ, 1 ಲಕ್ಷ ರೂ. ಬೆಲೆಗೆ ಮಾರಾಟ ಮಾಡಿತ್ತು.
ನ್ಯಾನೋ ಅನೇಕ ಭಾರತೀಯ ಮಧ್ಯಮ ವರ್ಗದ ಕುಟುಂಬಗಳಿಗೆ ಮೊದಲು ಖರೀದಿಸಿದ ಕಾರು ಎಂಬ ಭಾವನೆಯನ್ನು ಪಡೆದಿದ್ದರೂ, ಕೆಲವು ವರ್ಷಗಳ ಹಿಂದೆ ಅದನ್ನು ನಿಲ್ಲಿಸಲಾಯಿತು. ಇಂದು, ಭಾರತದ ಅತ್ಯಂತ ಕಾಂಪ್ಯಾಕ್ಟ್ ಮತ್ತು ಕೈಗೆಟುಕುವ ಕಾರು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ.
ಉದ್ಯಮಿ ರತನ್ ಟಾಟಾ ಅವರು ಹೃದಯಸ್ಪರ್ಶಿ ಪೋಸ್ಟ್‌ನಲ್ಲಿ ನ್ಯಾನೋವನ್ನು ಬಿಡುಗಡೆ ಮಾಡಲು ಪ್ರೇರೇಪಿಸಿದ ನೈಜ ಕಾರಣವನ್ನು ಹಂಚಿಕೊಂಡಿದ್ದಾರೆ. ಭಾರತೀಯ ಕುಟುಂಬಗಳಿಗೆ ರಸ್ತೆ ಪ್ರಯಾಣವನ್ನು ಸುರಕ್ಷಿತವಾಗಿಸುವ ಅವರ ಬಯಕೆಯಿಂದ ಇದು ಪ್ರಾರಂಭವಾಯಿತು ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ವಿವರಿಸಿದ ಅವರು, ಸ್ಕೂಟರ್‌ಗಳಲ್ಲಿ ಕುಟುಂಬ ಪ್ರಯಾಣಿಸುತ್ತಿದ್ದುದೇ ತನ್ನನ್ನು ನಿಜವಾಗಿಯೂ ಪ್ರೇರೇಪಿಸಿದ್ದು ಮತ್ತು ಅಂತಹ ವಾಹನವನ್ನು ಉತ್ಪಾದಿಸುವ ಬಯಕೆಯನ್ನು ಹುಟ್ಟುಹಾಕಿದ್ದಾಗಿ ತಿಳಿಸಿದ್ದಾರೆ. ತಂದೆ-ತಾಯಿ, ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಕುಟುಂಬ ಸಂಚರಿಸುವುದನ್ನು ಕಂಡಾಗ ತನಗೆ ಈ ನ್ಯಾನೋ ಕಾರಿನ ಆಲೋಚನೆ ಬಂದಿದ್ದಾಗಿ ಹೇಳಿದ್ದಾರೆ. ಹೀಗಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗದಂತೆ, ಕೈಗೆಟಕುವ ದರದಲ್ಲಿ ನ್ಯಾನೋ ಕಾರನ್ನು ತಯಾರಿಸಲಾಯಿತು.
ಮುಂಬೈನಲ್ಲಿ ಪ್ರಯಾಣಿಸುತ್ತಿರಬೇಕಾದ್ರೆ, ಭಾರಿ ಮಳೆಯ ಮಧ್ಯೆ ದಂಪತಿ, ತಮ್ಮಿಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿರುವುದನ್ನು ನೋಡಿದೆ. ಹೀಗಾಗಿ ಇದಕ್ಕೆ ತಾನೇನಾದ್ರೂ ಮಾಡಬೇಕು ಎಂದು ಆಲೋಚಿಸಿದಾಗ ನ್ಯಾನೋ ಕಾರಿನ ಪರಿಕಲ್ಪನೆ ಮೂಡಿದ್ದಾಗಿ ಅವರು ವಿವರಿಸಿದ್ದಾರೆ. ಇನ್ನು ನೆಟ್ಟಿಗರು ರತನ್ ಟಾಟಾರ ಈ ಮಾನವೀಯ ಕಾರ್ಯಕ್ಕೆ ಪ್ರಶಂಸೆಗಳ ಮಹಾಪೂರವನ್ನೇ ಹರಿಸಿದ್ದಾರೆ. ನೆಟ್ಟಿಗರು ಇವರನ್ನು ನಿಜವಾದ ಭಾರತದ ರತ್ನ ಎಂದು ಕರೆದಿದ್ದಾರೆ.
ದುರದೃಷ್ಟವಶಾತ್, ಮಾರ್ಕೆಟಿಂಗ್ ವೈಫಲ್ಯ, ಸುರಕ್ಷತಾ ಕಾಳಜಿಗಳು ಮತ್ತು ಭಾರತದಲ್ಲಿ ಅಗ್ಗದ ಕಾರುಗಳ ಬೇಡಿಕೆಯಲ್ಲಿ ಕುಸಿತ ಸೇರಿದಂತೆ ಹಲವು ಕಾರಣಗಳಿಂದ ಟಾಟಾ ಮೋಟಾರ್ಸ್, ನ್ಯಾನೋ ಉತ್ಪಾದನೆಯನ್ನು ನಿಲ್ಲಿಸಿತು.