ಮುಂಬೈ: ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರು ಟಾಟಾ ನ್ಯಾನೋದಲ್ಲಿ ತಾಜ್ ಹೋಟೆಲ್‌ಗೆ ಆಗಮಿಸಿರುವ ವಿಡಿಯೋ ವೈರಲ್ ಆಗಿದ್ದು, ಇದು ನೆಟ್ಟಿಗರ ಹೃದಯ ಗೆದ್ದಿದೆ.
ಮಧ್ಯಮವರ್ಗದವರಿಗೆಂದೇ ತಯಾರಿಸಲಾಗಿದ್ದ ಬಜೆಟ್ ಸ್ನೇಹಿ ಕಾರು ನ್ಯಾನೋವನ್ನು 2008ರಲ್ಲಿ ಬಿಡುಗಡೆ ಮಾಡಲಾಯಿತು. ರತನ್ ಟಾಟಾ ಕೆಲವು ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದರು. ಈಗ, ಟಾಟಾ ಗ್ರೂಪ್‌ನ ಅಧ್ಯಕ್ಷ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ ಗೆ ಆಗಮಿಸುವ ಮುಖಾಂತರ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ.
ಮುಂಬೈ ಮೂಲದ ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ರತನ್ ಟಾಟಾ ಅವರು ಯಾವುದೇ ಅಂಗರಕ್ಷಕರು ಇಲ್ಲದೆ ಬಿಳಿ ಬಣ್ಣದ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ ಗೆ ಆಗಮಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಅವರನ್ನು ಹೋಟೆಲ್ ಸಿಬ್ಬಂದಿ ಒಳಗೆ ಕರೆದೊಯ್ದಿದ್ದಾರೆ. ರತನ್ ಟಾಟಾರ ಸರಳತೆ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಹಲವಾರು ವೀಕ್ಷಣೆ, ಪ್ರತಿಕ್ರಿಯೆಗಳೊಂದಿಗೆ ವಿಡಿಯೋ ವೈರಲ್ ಆಗಿದೆ. ಕೆಲವರು ಕೈಗಾರಿಕೋದ್ಯಮಿಗೆ ತಮ್ಮ ಗೌರವವನ್ನು ಸೂಚಿಸಿದರೆ, ಇನ್ನು ಕೆಲವರು ನಿಜ ಜೀವನದಲ್ಲಿ ರತನ್ ಟಾಟಾ ಅವರು ಎಷ್ಟು ಸರಳ ವ್ಯಕ್ತಿಯಾಗಿದ್ದಾರೆ ಎಂದು ಕೊಂಡಾಡಿದ್ದಾರೆ.
ಟಾಟಾ ಮೋಟಾರ್ಸ್ ಅಧಿಕೃತವಾಗಿ ಜನವರಿ 10, 2008 ರಂದು ನ್ಯಾನೋವನ್ನು ಬಿಡುಗಡೆ ಮಾಡಿತು. ಇದೀಗ ಬೇಡಿಕೆ ಬಹಳಷ್ಟು ಕಡಿಮೆಯಿದ್ದುದರಿಂದ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.