ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಇಲ್ಲಿದೆ. ಕೇಂದ್ರ ಸರ್ಕಾರದ ವಿವಿಧ ಉದ್ಯೋಗಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತೋಮರ್ ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದಾರೆ.
ಈ ವರ್ಷದ ಅಂತ್ಯ ಅಥವಾ 2022 ರ ಆರಂಭದ ವೇಳೆಗೆ ಈ ಪ್ರಕ್ರಿಯೆ ಆರಂಭವಾಗಲಿದ್ದು, ಈವರೆಗೆ ನಡೆಯುತ್ತಿದ್ದ ಸ್ಟಾಪ್ ಸೆಲೆಕ್ಷನ್ ಕಮೀಷನ್ (ಎಸ್.ಎಸ್.ಸಿ.), ರೈಲ್ವೇ ನೇಮಕಾತಿ ವಿಭಾಗ ಹಾಗೂ ಬ್ಯಾಂಕಿಂಗ್ ನೇಮಕಾತಿ (ಐ.ಬಿ.ಪಿ.ಎಸ್) ಗಳು ಸಾಮಾನ್ಯ ಅರ್ಹತಾ ಪರೀಕ್ಷೆ ಮೂಲಕ ನಡೆಯಲಿವೆ.
ಈ ಪ್ರಕ್ರಿಯೆ ಮೂಲಕ ನೇಮಕಾತಿ ಈಗಾಗಲೇ ಆರಂಭವಾಗಬೇಕಿತ್ತಾದರೂ ಕೊರೊನಾ ಕಾರಣಕ್ಕಾಗಿ ವಿಳಂಬವಾಗಿದೆ ಎನ್ನಲಾಗಿದ್ದು, ಯುವ ಜನತೆಗೆ ಸಮಾನ ಉದ್ಯೋಗಾವಕಾಶ ಲಭ್ಯವಾಗಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಆಶಯದ ಹಿನ್ನಲೆಯಲ್ಲಿ ಇಂತದೊಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ವಿವಿಧ ಭಾಗಗಳಲ್ಲಿರುವ ಯುವ ಜನತೆಗೆ ಯಾವುದೇ ತಾರತಮ್ಯವಾಗದಂತೆ ಉದ್ಯೋಗ ಲಭಿಸಬೇಕೆಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಸಲಹೆ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈಗಾಗಲೇ ಇದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.