ಬೇಲೂರು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ವಿಶ್ವವಿಖ್ಯಾತ ಚೆನ್ನಕೇಶವ ದೇವಾಲಯ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ದೇಶ, ವಿದೇಶಗಳ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಬೇಲೂರು ಪ್ರಮುಖವಾಗಿದೆ.
ಹೊಯ್ಸಳರ ಕಾಲದಲ್ಲಿ ಪ್ರಮುಖ ಸ್ಥಳವಾಗಿದ್ದ ಬೇಲೂರಿನಲ್ಲಿ 443.5 ಅಡಿ ಉದ್ದ, 396 ಅಡಿ ಅಗಲದ ಅಂಗಳದ ಮಧ್ಯೆ ಚೆನ್ನಕೇಶವ ದೇವಾಲಯ ಇದೆ. ನಕ್ಷತ್ರ ಆಕಾರದ 4 ಅಡಿ ಎತ್ತರದ ಜಗುಲಿಯ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ.
ದೇವಾಲಯದಲ್ಲಿ ದ್ರಾವಿಡ ಶೈಲಿಯ ಗೋಪುರಗಳಿವೆ. ದೇವಾಲಯಕ್ಕೆ 3 ಬಾಗಿಲು ಇದ್ದು, ನವರಂಗ ಬಾಗಿಲ ಇಕ್ಕೆಲಗಳಲ್ಲಿ ಸಳನು ಹುಲಿಯನ್ನು ಕೊಂದ ಚಿತ್ರಣವಿದೆ. ಇಲ್ಲಿನ ಜಾಲರಂಧ್ರಗಳು ವೈವಿಧ್ಯತೆಯಿಂದ ಕೂಡಿವೆ. ಚೆನ್ನಕೇಶವ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ, ಸುತ್ತಲೂ ಮನಮೋಹಕವಾಗಿ ಕೆತ್ತಿರುವ ರಾಮಾಯಣ, ಮಹಾಭಾರತದ ಕಥಾ ಭಾಗಗಳು.
ದೇವಾಲಯದ ಸುತ್ತಲೂ ಕಡೆದಿರುವ ಶಿಲಾಬಾಲಿಕೆಯರ ಚಿತ್ರಣಗಳು ವಿಶ್ವ ಪ್ರಸಿದ್ಧಿಯಾಗಿವೆ. ಶಿಲ್ಪಿಗಳ ಕೌಶಲ್ಯಕ್ಕೆ ಇದು ಸಾಕ್ಷಿಯಾಗಿದೆ. ಚೆನ್ನಕೇಶವ ದೇವಾಲಯದ ಜೊತೆಗೆ ಕಪ್ಪೆಚನ್ನಿಗರಾಯನ ಗುಡಿ, ವೀರನಾರಾಯಣ ದೇವಸ್ಥಾನಗಳು ಕೂಡ ಅದ್ಭುತವಾದ ಶಿಲ್ಪಕಲಾ ವೈಭವವನ್ನು ಮೈಗೂಡಿಸಿಕೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಅನುಕೂಲವಾಗುತ್ತದೆ. ನೀವು ಒಮ್ಮೆ ವಿಶ್ವ ಖ್ಯಾತಿಯ ಬೇಲೂರು ಚೆನ್ನಕೇಶವ ದೇವಾಲಯವನ್ನು ನೋಡಿ ಬನ್ನಿ.