
ವೆಂಬನಾಡ್ ಹಿನ್ನೀರಿನ ಸಮೀಪವಿರುವ ನಾಲ್ಕು ಐಷಾರಾಮಿ ವಾಟರ್ಫ್ರಂಟ್ ಅಪಾರ್ಟ್ಮೆಂಟ್ಗಳನ್ನು ಪರಿಸರ ನಿಯಮ ಉಲ್ಲಂಘಿಸಿ ಕಟ್ಟಲಾಗಿತ್ತು. ಅಂದಹಾಗೆ 2020ರಲ್ಲಿ ಅದನ್ನು ಕೆಡವಲಾಗಿದ್ದು, ಈಗ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದನ್ನು ಈಗ ನಡೆದಿರುವ ಘಟನೆ ಎಂದು ಬಿಂಬಿಸಿರುವ ಕಾರಣ ನೆಟ್ಟಿಗರು ಬಹಳ ಅಚ್ಚರಿಯಿಂದ ನೋಡುತ್ತಿದ್ದಾರೆ.
ನಾಲ್ಕು ಅಪಾರ್ಟ್ಮೆಂಟ್ಗಳ ಸಂಕೀರ್ಣಗಳನ್ನು ಕರಾವಳಿ ನಿಯಂತ್ರಣ ವಲಯ ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಕಂಡುಕೊಂಡು 2019ರಲ್ಲಿ ಅದನ್ನು ತೆರವುಗೊಳಿಸಲು ಆದೇಶಿಸಿತ್ತು.
19 ಅಂತಸ್ತಿನ ಕಟ್ಟಡವನ್ನು ಜನವರಿ 11, 2020ರಂದು ಕೆಡವಲಾಯಿತು. ಬೆಳಗ್ಗೆ 11:20ರ ಸುಮಾರಿಗೆ 91 ಅಪಾರ್ಟಮೆಂಟ್ಗಳಿದ್ದ ಕಟ್ಟಡವನ್ನು 212 ಕೆಜಿ ಸ್ಫೋಟಕ ಬಳಸಿ ಧರೆಗೆ ಉರುಳಿಸಲಾಯಿತು. ಕೆಡವುವ ಪೂರ್ವದಲ್ಲಿ 77 ಕುಟುಂಬಗಳನ್ನು ಹೊರಕಳಿಸಬೇಕಿತ್ತು.
ಮನೆ ಬೀಳಿಸುವ ಸಂದರ್ಭದಲ್ಲಿ ಸಮೀಪದ ಫ್ಲೈಓವರ್ನಲ್ಲಿ ಹೊಗೆ ಆವರಿಸಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹತ್ತು ವರ್ಷಗಳಷ್ಟು ಹಳೆಯದಾದ ಕಟ್ಟಡವು ಒಂಬತ್ತು ಸೆಕೆಂಡುಗಳಲ್ಲಿ ಕುಸಿದು ಬಿತ್ತು, ಕಾಂಕ್ರೀಟ್ ಧೂಳಿನಲ್ಲಿ ಸುತ್ತಮುತ್ತ ಪ್ರದೇಶ ಆವರಿಸಿತ್ತು.
ನಾಲ್ಕು ಅಕ್ರಮ ಅಪಾರ್ಟ್ಮೆಂಟ್ಗಳ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆಗೆ ವಿಧಿಸಿ, ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ, ನೂರಾರು ಜನರು ತೆರವು ವಲಯದ ಹೊರಗಿನ ಮನೆಗಳು ಮತ್ತು ಇತರ ಕಟ್ಟಡಗಳ ಮೇಲೆ ಕಾರ್ಯಾಚರಣೆ ನೋಡುತ್ತಾ ಕುಳಿತಿದ್ದರು.