ನೈನಿತಾಲ್ ಗೆ ಈ ಹೆಸರು ಬಂದಿರುವುದು ಅಲ್ಲಿರುವ ನೈಲ್ ಎಂಬ ಸರೋವರದಿಂದ. ಉತ್ತರಖಂಡ್ ರಾಜ್ಯದ ಕುಮಾನ್ ನಲ್ಲಿರುವ ಈ ಸುಂದರ ತಾಣವು ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತದೆ.
ಲೇಕ್ ಡಿಸ್ಟ್ರಿಕ್ಟ್ ಆಫ್ ಇಂಡಿಯಾ ಎಂದೂ ಕರೆಯಲ್ಪಡುವ ಇದು ಪ್ರವಾಸಿಗರ ನೆಚ್ಚಿನ ತಾಣ. ಪಾರ್ವತಿಯ ದೇಹದೊಂದಿಗೆ ಶಿವ ತಾಂಡವ ನೃತ್ಯವಾಡಿದ ಸ್ಥಳವಿದು ಎನ್ನಲಾಗಿದೆ.
ಇಲ್ಲಿ ಪ್ರಾಣಿ ಸಂಗ್ರಹಾಲಯವಿದ್ದು, ಇದು ಕೂಡಾ ಪ್ರವಾಸಿಗರ ನೆಚ್ಚಿನ ವೀಕ್ಷಣೀಯ ತಾಣ. ಅಪರೂಪದ ಜಾತಿಯ ಕರಡಿ, ಚಿರತೆಗಳು ಇಲ್ಲಿವೆ. ಇಲ್ಲಿರುವ ಹಲವು ಉದ್ಯಾನಗಳ ಪೈಕಿ ಕೆಲವಷ್ಟೇ ವೀಕ್ಷಣೆಗೆ ತೆರೆದುಕೊಂಡಿರುತ್ತವೆ. ಸರೋವರದಿಂದ ಸ್ವಲ್ಪ ದೂರದಲ್ಲಿರುವ ನೈನಾ ದೇವಿ ದೇವಸ್ಥಾನ ಭೂ ಕುಸಿತದಿಂದ ಹಾಳಾದರೂ ಮತ್ತೆ ಸ್ಥಳೀಯರ ಸಹಕಾರದಿಂದ ಪುನರ್ ನಿರ್ಮಾಣಗೊಂಡಿದೆ.
ಪಂತ್ ನಗರ ಇಲ್ಲಿಗೆ ಸಮೀಪವಿರುವ ವಿಮಾನ ನಿಲ್ದಾಣ. ಇದು 72 ಕಿಮೀ. ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 300 ಕಿಮೀ ದೂರದಲ್ಲಿದೆ. ರೈಲಿನ ಮೂಲಕವೂ ಇಲ್ಲಿಗೆ ತಲುಪಬಹುದು.