ಜ್ಞಾನಸಹ್ಯಾದ್ರಿ /ಶಂಕರಘಟ್ಟ: ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ ಇರಬೇಕು ಎಂದು ರಾಜ್ಯಪಾಲ ಹಾಗೂ ಕುವೆಂಪು ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರು ಇಂದು ಕುವೆಂಪು ವಿವಿ ಆವರಣದಲ್ಲಿ ಆಯೋಜಿಸಿದ್ದ 31, 32 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ನೀವೆಲ್ಲರೂ ಪದವಿ ಪಡೆಯುತ್ತಿರುವುದು ನನಗೆ ಹರ್ಷ ತಂದಿದೆ. ಪದವಿ ಪಡೆದ ವಿದ್ಯಾರ್ಥಿಗಳು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು. ಪದವಿ ಮುಗಿದ ಮೇಲೆ ಕೇವಲ ಕೆಲಸಕ್ಕಾಗಿ ಹುಡುಕಾಟ ನಡೆಸದೇ ಅಧ್ಯಯನಶೀಲರಾಗಿ ಆ ಮೂಲಕ ದೇಶದ ಅಭಿವೃದ್ಧಿಯಲ್ಲಿ ತೊಡಗಿ ಇದೆಲ್ಲಕ್ಕೂ ಗುಣಮಟ್ಟದ ನೈತಿಕ ಶಿಕ್ಷಣ ಬೇಕಾಗಿದೆ ಎಂದರು.
ರಾಷ್ಟ್ರಕವಿ ಕುವೆಂಪು ಹೆಸರೇ ವಿಶ್ವವಿದ್ಯಾಲಯಕ್ಕೆ ಪ್ರೇರಣಾ ಶಕ್ತಿಯಾಗಿದೆ. ಕುವೆಂಪು ವಿವಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ನಾನು ಕುವೆಂಪು ವಿವಿ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ ಎಂದರು.
ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆ, ಅಧ್ಯಯನ ಮನೋಭಾವಕ್ಕೆ ಹತ್ತಿರವಾಗುತ್ತದೆ. ಜೊತೆಗೆ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಇದು ಪ್ರೇರಕ ಮತ್ತು ಪೂರಕವಾಗುತ್ತದೆ ಎಂದರು.
ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕಗಳು ಕೂಡ ಸಿಗುತ್ತಿಲ್ಲ. ಆದರೆ, ದಿವ್ಯಾಂಗರ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಪದಕಗಳು ಬರುತ್ತಿರುವುದು ಸ್ವಾಗತದ ವಿಷಯವಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗೌರವ ಡಾಕ್ಟರೇಟ್ ಪದವಿ ಪಡೆದವರು ಆಯಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಸಾಧನೆ ವ್ಯರ್ಥವಾಗಬಾರದು. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಸಾಧನೆ ಮಾಡಬೇಕು. ಅವರ ತಿಳಿವಳಿಕೆ ಜ್ಞಾನ ಯುವ ಪೀಳಿಗೆಗೆ ಪ್ರೇರಣೆಯಾಗಿರಬೇಕು. ಪದವಿ ಪಡೆದ ರ್ಯಾಂಕ್ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು ಎಂದರು.