ಕಳೆದ ರಾತ್ರಿ ಬೆಂಗಳೂರಿನಲ್ಲಿ ವಿಧಿವಶರಾಗಿರುವ ಆಹಾರ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ಏರ್ ಲಿಫ್ಟ್ ಮಾಡಲಾಗುತ್ತಿದ್ದು, ಮೊದಲಿಗೆ ಉಮೇಶ್ ಕತ್ತಿ ಅವರ ಮಾಲೀಕತ್ವದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಬಳಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಬಳಿಕ ಅವರ ಹುಟ್ಟೂರಾದ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕನನ್ನು ಕಳೆದುಕೊಂಡು ಅಲ್ಲಿನ ಜನತೆ ಕಂಬನಿ ಮಿಡಿಯುತ್ತಿದ್ದಾರೆ.
ತಮ್ಮ 25ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಉಮೇಶ್ ಕತ್ತಿ, ರಾಜಕಾರಣದಲ್ಲಿ ನೇರ ನಿಷ್ಠುರ ನಡೆಗೆ ಹೆಸರಾಗಿದ್ದರು. ಒಟ್ಟು 8 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಒಮ್ಮೆ ಮಾತ್ರ ಸೋಲು ಕಂಡಿದ್ದರು.
ತಮಗನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ಉಮೇಶ್ ಕತ್ತಿ ಈ ಕಾರಣಕ್ಕಾಗಿ ಹಲವು ಬಾರಿ ವಿವಾದಕ್ಕೂ ಒಳಗಾಗಿದ್ದರು. ಸರ್ಕಾರದಲ್ಲಿ ಸಚಿವರಾಗಿದ್ದುಕೊಂಡೇ ಅವರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿದ ಕಾರಣಕ್ಕೆ ಟೀಕೆಗೂ ಗುರಿಯಾಗಿದ್ದರು.
ತಮ್ಮ ರಾಜಕೀಯ ಜೀವನದಲ್ಲಿ ಆರು ಬಾರಿ ಪಕ್ಷ ಬದಲಿಸಿದ್ದರೂ ಸಹ ಬೆಳಗಾವಿ ಜಿಲ್ಲೆಯ ಜನತೆ ವಿಧಾನಸಭಾ ಚುನಾವಣೆಗಳಲ್ಲಿ ಅವರ ಕೈಬಿಟ್ಟಿರಲಿಲ್ಲ. ವಿಧಾನಸಭೆಗೆ ಅತಿ ಹೆಚ್ಚು ಬಾರಿ ಆಯ್ಕೆಯಾದ ಬೆರಳೆಣಿಕೆಯ ಶಾಸಕರ ಪೈಕಿ ಉಮೇಶ್ ಕತ್ತಿ ಅವರು ಸಹ ಒಬ್ಬರು ಎಂಬುದು ಗಮನಾರ್ಹ ಸಂಗತಿ.