ಚಲನಚಿತ್ರಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಡಿಯೋಗಳಲ್ಲಿ ವಾಹನ ಚಾಲಕರ ಸಾಹಸ ನೋಡಿರುತ್ತೇವೆ. ಇಲ್ಲೊಬ್ಬ ಆಟೋ ಚಾಲಕ ರೈಲ್ವೆ ನಿಲ್ದಾಣದೊಳಗೆ ಆಟೋ ಓಡಿಸಿಕೊಂಡು ಬಂದಿದ್ದಾನೆ.
ಮುಂಬೈನ ಕುರ್ಲಾದಲ್ಲಿ ರೈಲ್ವೇ ಸ್ಟೇಷನ್ ಪ್ಲಾಟ್‌ಫಾರ್ಮ್‌ನಲ್ಲಿ ಆಟೋರಿಕ್ಷಾ ಸಂಚರಿಸಿದ ವಿಡಿಯೋ ವೈರಲ್ ಆಗಿದ್ದು, ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ.
ಕೆಲವರು ವಿಡಿಯೋ ಕ್ಲಿಪ್ ನೋಡಿ ಆನಂದಿಸಿದರೆ, ಮತ್ತೆ ಕೆಲವರು ಈ ರೀತಿಯ ಧೈರ್ಯದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಪೊಲೀಸರನ್ನು ಟ್ಯಾಗ್ ಮಾಡುವ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ನಂತರ ಅಧಿಕಾರಿಗಳು ಕ್ರಮಕ್ಕೆ ಮುಂದಾದರು.
ರೈಲ್ವೇ ಪೋಲೀಸ್ ಫೋರ್ಸ್‌ನಿಂದ ಮಾಹಿತಿ ಪ್ರಕಾರ ತಪ್ಪಿತಸ್ಥ ಚಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಆಟೋರಿಕ್ಷಾ ಸವಾರಿ ಮಾಡಿದ್ದಕ್ಕಾಗಿ ರೈಲ್ವೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ರೈಲ್ವೆ ಪೊಲೀಸ್ ಫೋರ್ಸ್ ಮುಂಬೈ ವಿಭಾಗವು ಟ್ವಿಟರ್‌ನಲ್ಲಿ, ದೂರನ್ನು ಗಂಭೀರವಾಗಿ ಪರಿಗಣಿಸಿದ್ದು ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಆಟೋರಿಕ್ಷಾವನ್ನು ವಶಪಡಿಸಿಕೊಂಡ ನಂತರ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ನ್ಯಾಯಾಲಯದ ಮುಂದೆ ಅವನನ್ನು ಹಾಜರುಪಡಿಸಲಾಯಿತು ಎಂದು ವಿವರಿಸಿದ್ದಾರೆ.
ಅಕ್ಟೋಬರ್ 12 ರಂದು ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಆಟೋರಿಕ್ಷಾವು ಕುರ್ಲಾ ಪ್ಲಾಟ್‌ಫಾರ್ಮ್ ನಂ.1 ಅನ್ನು ಪ್ರವೇಶಿಸಿತು ಎಂದು ಕುರ್ಲಾ ಆರ್‌ಪಿಎಫ್ ತಿಳಿಸಿದೆ.