ಮಹಿಳಾ ಸಹೋದ್ಯೋಗಿಯ ಆರೋಪಗಳಿಂದ ನೊಂದು ಹರಿಯಾಣದ ಗುರುಗ್ರಾಮದಲ್ಲಿ ಎಂಎನ್ಸಿ ಕಂಪನಿಯೊಂದರ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 40 ವರ್ಷದ ಅಮಿತ್ ಕುಮಾರ್ ಮೃತ ವ್ಯಕ್ತಿ. ರವಿನಗರ ಕಾಲೋನಿ ನಿವಾಸಿಯಾಗಿದ್ದ ಅಮಿತ್ ಕುಮಾರ್, ತಮ್ಮ ಮನೆಯ ಕೊಠಡಿಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಮಿತ್ ನಾಲ್ಕು ಪುಟಗಳ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ. ಕಚೇರಿಯಲ್ಲಿ ತನ್ನ ವಿರುದ್ಧ ಮಾಡಿರುವ ಆರೋಪಗಳಿಂದಾಗಿ ಚಾರಿತ್ರ್ಯಕ್ಕೇ ಧಕ್ಕೆ ಬಂದಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾನೆ. ಅಮಿತ್ ಕುಮಾರ್ಗೆ ಸೇರಿದ ಮೊಬೈಲ್ ಅನ್ನು ವಶಪಡಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಮಿತ್ ಕುಮಾರ್ ಕಳೆದ ಒಂದೂವರೆ ತಿಂಗಳಿನಿಂದ ಖಾಸಗಿ ಸಂಸ್ಥೆಯೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿನ ನಿರ್ಧಾರವನ್ನು ಸಹೋದ್ಯೋಗಿಗಳಿಗೆ ಆತ ಎಸ್ಎಂಎಸ್ ಮೂಲಕ ತಿಳಿಸಿದ್ದಾನೆ.
ಪತ್ನಿ ಪೂಜಾ, ಅಮಿತ್ ಸಾವಿನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸಂಜೆ ಸುಮಾರು 7.20ರ ವೇಳೆಗೆ ಪೂಜಾಗೆ ಆತನ ಸಹೋದ್ಯೋಗಿಗಳಿಂದ್ಲೇ ಕರೆ ಬಂದಿತ್ತು. ಕಳೆದ ರಾತ್ರಿ ಕಚೇರಿಯಲ್ಲಿ ಜಗಳವಾಗಿದೆ, ತಾನು ಆತ್ಮಹತ್ಯೆ ಮಾಡಿಕೊಳ್ತಿರೋದಾಗಿ ಅಮಿತ್ ಕುಮಾರ್ ತಮಗೆ ಮೆಸೇಜ್ ಕಳಿಸಿದ್ದಾನೆ ಅಂತಾ ತಿಳಿಸಿದ್ರು.
ಗಾಬರಿಯಾದ ಪೂಜಾ ಕೂಡಲೇ ಮೇಲಿನ ಮಹಡಿಗೆ ಓಡಿದ್ದಾಳೆ. ಆಕೆ ಬರುವಷ್ಟರಲ್ಲಿ ಅಮಿತ್ ಫ್ಯಾನ್ಗೆ ನೇತಾಡುತ್ತಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಪತಿ ಸಾವಿನ ನಿರ್ಧಾರಕ್ಕೆ ಬರಲು ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೂಜಾ ಒತ್ತಾಯಿಸಿದ್ದಾಳೆ.