
ದೆಹಲಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಪೊಲೀಸರೇ ರಕ್ಷಣೆ ಮಾಡಿದ್ದಾರೆ. ಆರ್ ಕೆ ಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಧಮಕಿ ಹಾಕ್ತಿದ್ದಾಳೆ ಅಂತ ಕರೆ ಬಂದಿತ್ತು. ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್‌ಟೇಬಲ್ ಧರಂ ರಾಜ್ ಆ ಸಮಯದಲ್ಲಿ ಕರ್ತವ್ಯದಲ್ಲಿದ್ದರು.
ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಖಾಕಿ ಪಡೆ ಸ್ಥಳಕ್ಕೆ ತಲುಪಿದಾಗ, ಮಹಿಳೆ ಬಾಗಿಲು ಹಾಕಿಕೊಂಡು ಕೋಣೆಯೊಳಗಿದ್ಲು. ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಳು. ಆ ಸಮಯದಲ್ಲಿ ಅವಳ ಪತಿ ಕಚೇರಿಯಲ್ಲಿದ್ದ. ತಕ್ಷಣವೇ ಪೊಲೀಸರು ಬಾಗಿಲು ಒಡೆದು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದ್ದಾರೆ.
ಸಕಾಲದಲ್ಲಿ ಬಂದು ಮಹಿಳೆಯ ಪ್ರಾಣ ಉಳಿಸಿದ್ದಾರೆ. ಕೊನೆಗೆ ಮಹಿಳಾ ಪೊಲೀಸರು ಆಕೆಯನ್ನು ಠಾಣೆಗೆ ಕರೆತಂದು ಕೌನ್ಸೆಲಿಂಗ್ ಮಾಡಿದ್ದಾರೆ. ಪತಿ-ಪತ್ನಿ ದೂರವಾಗಿರುವುದಾಗಿ ಆಕೆ ಮಾಹಿತಿ ನೀಡಿದ್ದಾಳೆ. ಪತಿ ಪ್ರತ್ಯೇಕವಾಗಿ ವಾಸಿಸುತ್ತಾನೆ ಎಂದು ಬಹಿರಂಗಪಡಿಸಿದ್ದಾಳೆ. ತಾನು ತೀವ್ರ ಖಿನ್ನತೆಯಿಂದ ಬಳಲುತ್ತಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಬಳಿಕ ಆಕೆಯ ಪತಿಯನ್ನೂ ಪೊಲೀಸರು ಠಾಣೆಗೆ ಕರೆತಂದು ಇಬ್ಬರಿಗೂ ಜೊತೆಯಾಗಿ ಕೌನ್ಸಿಲಿಂಗ್ ನಡೆಸಿದ್ದಾರೆ.