ದೇಶದ ನಕಲಿ ಪಿತ ಹಾಗೂ ನಕಲಿ ಚಾಚಾ ಎಂದು ಫೇಸ್ಬುಕ್ ಪೋಸ್ಟ್ನ್ನು ಅಪ್ಲೋಡ್ ಮಾಡಿದ ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಕ್ಷಮೆ ಯಾಚಿಸಲೇಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಒತ್ತಾಯಿಸಿದೆ. ಮೋಹನ್ ಯಾದವ್, ಮಹಾತ್ಮ ಗಾಂಧೀಜಿ ಹಾಗೂ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಯಾದವ್ ತಮ್ಮ ಫೇಸ್ಬುಕ್ ಪೋಸ್ಟ್ನ್ನು ಈಗ ಅಳಿಸಿ ಹಾಕಿದ್ದಾರೆ ಎಂದು ಸಂಸದ ಹಾಗೂ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಹೇಳಿದ್ದಾರೆ. ಗಣರಾಜ್ಯೋತ್ಸವದ ಪರೇಡ್ನಲ್ಲಿ ಸುಭಾಷ್ ಚಂದ್ರ ಬೋಸ್ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ಇದ್ದರು. ದೇಶದ ನಕಲಿ ತಂದೆ ಅಥವಾ ನಕಲಿ ಚಾಚಾ ಇರಲಿಲ್ಲ. ಕಬ್ಬಿಣದ ಮಹಿಳೆ ಅಥವಾ ಕಂಪ್ಯೂಟರ್ ಸಂಶೋಧಕರು ಅಲ್ಲಿ ಇರಲಿಲ್ಲ ಎಂದು ಭೂಪೇಂದ್ರ ಗುಪ್ತಾ ಹೇಳಿದ್ದಾರೆ.
ಗಣರಾಜ್ಯೋತ್ಸವದ ಪರೇಡ್ನಲ್ಲಿ ಕಾಶಿ ವಿಶ್ವನಾಥ ಹಾಗೂ ವೈಷ್ಣೋದೇವಿಯ ಸ್ತಂಭಗಳಿದ್ದವು. ಇದು ಸನಾತನ ಸಂಸ್ಕೃತಿಯ ದೃಶ್ಯವಾಗಿತ್ತು. ನನ್ನ ದೇಶ ನಿಜಕ್ಕೂ ಬದಲಾಗುತ್ತಿದೆ. ಬ್ರಿಟಿಷ್ ಗುಲಾಮರ ಕಪಿಮುಷ್ಠಿಯಿಂದ ಹೊರಬರುತ್ತಿದೆ. ನನ್ನ ದೇಶ ನಿಜವಾಗಿಯೂ ಸ್ವತಂತ್ರವಾಗಿದೆ ಎಂದು ಯಾದವ್ ಅಳಿಸಿ ಹಾಕಿರುವ ಪೋಸ್ಟ್ನ್ನು ಉಲ್ಲೇಖಿಸಿ ಗುಪ್ತಾ ಈ ಮಾತನ್ನು ಹೇಳಿದರು.