ಪ್ರಯಾಣದ ವೇಳೆ ತಲೆಯಲ್ಲೇ ಉಳಿಯುವ ಧೂಳು, ಹೊಟ್ಟಿನ ಸಮಸ್ಯೆ, ಸರಿಯಾದ ಅರೈಕೆ ಇಲ್ಲದಿರುವುದರಿಂದ ಕೂದಲು ಉದುರುವುದು ಹೆಚ್ಚಲಾರಂಭಿಸುತ್ತದೆ. ಇದನ್ನು ಸರಿಪಡಿಸಲು, ಉದುರಿದ ಕೂದಲು ಮತ್ತೆ ಬೆಳೆಯುವಂತೆ ಮಾಡಲು ನೆಲ್ಲಿಕಾಯಿ ಮಹತ್ವದ ಪಾತ್ರ ವಹಿಸುತ್ತದೆ.
ನೀವು ತಲೆಗೆ ಬಳಸುವ ಯಾವುದೇ ಶ್ಯಾಂಪೂವಿನ ಜಾಹಿರಾತು ವೀಕ್ಷಿಸಿದರೂ ಪ್ರತಿಯೊಂದರಲ್ಲೂ ನೆಲ್ಲಿಕಾಯಿಯ ಮಹತ್ವವನ್ನು ಒತ್ತಿ ಒತ್ತಿ ಹೇಳಿರುವುದನ್ನು ಗಮನಿಸಿರಬಹುದು. ನೇರವಾಗಿ ನೆಲ್ಲಿಕಾಯಿ ಕೂದಲು ಬೆಳೆಸಲು ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ.
ನೆಲ್ಲಿಕಾಯಿ, ಅಂಟುವಾಳ ಮತ್ತು ಸೀಗೆಪುಡಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಬೆರೆಸಿ. ಈ ಲೇಪನವನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ತಲೆ ತೊಳೆದುಕೊಳ್ಳಿ. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ತಲೆಕೂದಲು ಉದುರುವುದು ಕಡಿಮೆಯಾಗುತ್ತದೆ.
ನೆಲ್ಲಿಕಾಯಿ ಪುಡಿಗೆ ಮೊಸರನ್ನು ಸೇರಿಸಿ ನೆತ್ತಿಗೆ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ. ನೆಲ್ಲಿಕಾಯಿ ಪುಡಿಗೆ ಮೆಂತೆ ಪುಡಿ ಬೆರೆಸಿ ಹಚ್ಚಿಕೊಳ್ಳುವುದರಿಂದಲೂ ಕೂದಲು ನೀಳವಾಗಿ ಬೆಳೆಯುತ್ತದೆ.