
ಚೀನಾದ ಶಿಮಿಯಾನ್ ಕೌಂಟಿಯಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ವಿದ್ಯಾರ್ಥಿಗಳನ್ನು ಕೂಡಲೇ ಶಿಕ್ಷಕರು ಶಾಲಾ ಕಟ್ಟಡದಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಈ ವೇಳೆ ಸಹಪಾಠಿಗಳು ತಮ್ಮ ಸ್ನೇಹಿತನನ್ನು ಮರೆತಿಲ್ಲ. ತಾವು ಓಡುವುದರ ಜೊತೆಗೆ ವ್ಹೀಲ್ ಚೇರ್ ನಲ್ಲಿ ಕುಳಿತ ಸಹಪಾಠಿಯನ್ನು ಸಹ ಜೊತೆಗೆ ಕರೆದೊಯ್ದಿದ್ದಾರೆ. ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ನಾರ್ವೆಯ ಮಾಜಿ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 31 ಸೆಕೆಂಡುಗಳ ಕ್ಲಿಪ್‌ನಲ್ಲಿ, ಭೂಕಂಪದ ಸಮಯದಲ್ಲಿ ವಿದ್ಯಾರ್ಥಿಗಳ ಗುಂಪು ತಮ್ಮ ತರಗತಿಯನ್ನು ಸ್ಥಳಾಂತರಿಸುವುದನ್ನು ಕಾಣಬಹುದು. ಗಾಲಿ ಕುರ್ಚಿಯಲ್ಲಿದ್ದ ತಮ್ಮ ಸಹಪಾಠಿಯನ್ನು ಅವರು ಮರೆಯಲಿಲ್ಲ. ಸಹೃದಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಸಹ ಆತನಿಗೆ ಸಹಾಯ ಮಾಡಿದ್ದಾರೆ. ಒಗ್ಗಟ್ಟಿನ ಶಕ್ತಿಗೆ ಇದಕ್ಕಿಂತ ಉದಾಹರಣೆ ಬೇರೆ ಬೇಕೆ ಎಂದು ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ಈ ಮಾನವೀಯತೆಗೆ ನೆಟ್ಟಿಗರು ಸಲಾಂ ಎಂದಿದ್ದಾರೆ. ಮೇ 20 ರಂದು ಶಿಮಿಯಾನ್ ಕೌಂಟಿಯಲ್ಲಿ ಭೂಕಂಪ ಸಂಭವಿಸಿದೆ.