ನಟ ಪುನೀತ್ ರಾಜಕುಮಾರ್ ನಮ್ಮನ್ನಗಲಿದರೂ ಸಹ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇಂದಿಗೂ ಕೂಡ ಪ್ರತಿಯೊಂದು ಊರುಗಳಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋ ಇದ್ದೇ ಇರುತ್ತದೆ. ಅದರಲ್ಲೂ ನೆಚ್ಚಿನ ನಟನನ್ನು ಕಳೆದುಕೊಂಡ ನೋವಿನಲ್ಲಿರುವ ಅವರ ಅಭಿಮಾನಿಗಳು ಅವರ ಸ್ಮರಣೆಯಲ್ಲಿ ಯಾವುದಾದರೊಂದು ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ.
ಇಂತಹುದೇ ಒಂದು ಘಟನೆಯಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನ ಫೋಟೋ ಸಮ್ಮುಖದಲ್ಲೇ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ವಿಜಯಪುರ ನಗರದ ಬಸವರಾಜ ಕಕ್ಕಳಮೇಲಿ ಈ ರೀತಿಯಾಗಿ ತಮ್ಮ ಅಭಿಮಾನ ಮೆರೆದಿದ್ದು, ವಿವಾಹ ಸಂದರ್ಭದಲ್ಲಿ ಕಲ್ಯಾಣ ಮಂಟಪದ ವೇದಿಕೆ ಮುಂಭಾಗ ಸೇರಿದಂತೆ ಎಲ್ಲೆಡೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರಗಳನ್ನು ಹಾಕಲಾಗಿತ್ತು.
ಪುನೀತ್ ರಾಜಕುಮಾರ್ ಅವರ ಪಕ್ಕಾ ಅಭಿಮಾನಿಯಾಗಿದ್ದ ಬಸವರಾಜ ಕಕ್ಕಳಮೇಲಿ ತಮ್ಮ ನೆಚ್ಚಿನ ನಟನ ಸಮ್ಮುಖದಲ್ಲೇ ವಿವಾಹ ಮಾಡಿಕೊಳ್ಳಬೇಕೆಂಬ ಬಯಕೆ ಹೊಂದಿದ್ದರು. ಆದರೆ ಪುನೀತ್ ನಿಧನದ ನಂತರ ಬಸವರಾಜ ಅವರ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಅವರು ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಸಮ್ಮುಖದಲ್ಲೇ ಶೋಭಾ ಅವರನ್ನು ವರಿಸಿದ್ದಾರೆ. ಬಸವರಾಜ ಕಕ್ಕಳಮೇಲಿ, ವಿವಾಹ ಆಮಂತ್ರಣ ಪತ್ರಿಕೆಯಲ್ಲೂ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಮುದ್ರಿಸಿದ್ದರು.