ಬೆಂಗಳೂರು : 100 ಕೋಟಿ ರೂ. ಸಾಲ ಪಡೆಯುವುದಕ್ಕಾಗಿ ಉದ್ಯಮಿಯೊಬ್ಬರು 1.80 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಎಚ್ ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಮಂಥೆನಾ ತರುಣ್ ಗಾಂಧಿ ಎಂಬುವವರೇ ಮೋಸಕ್ಕೆ ಒಳಗಾದ ಉದ್ಯಮಿ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕಾರ್ತಿವೇಲನ್ ಎಂಬ ವ್ಯಕ್ತಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಹಣ ಕಳೆದುಕೊಂಡ ವ್ಯಕ್ತಿ ಹೊಸ ಉದ್ಯಮಕ್ಕಾಗಿ ಸಾಲದ ಹುಡುಕಾಟದಲ್ಲಿದ್ದರು. ಈ ಸಮಯದಲ್ಲಿ ಅವರಿಗೆ ನಗರದಲ್ಲಿನ ಪ್ಯೂಚರ್ ಕ್ರೆಸ್ಟ್ ವೆಂಚರ್ಸ್ ಎಂಬ ಕಂಪನಿ ಸಾಲ ನೀಡುತ್ತದೆ ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.
ಆಗ ಅವರು ಕಂಪನಿ ಸಂಪರ್ಕಿಸಿದ್ದಾರೆ.
ಈ ಸಂದರ್ಭದಲ್ಲಿ ಕಂಪನಿಯ ಮುಖ್ಯಸ್ಥ ನೂರು ಕೋಟಿ ರೂಪಾಯಿ ಸಾಲಕ್ಕೆ, ಮೂರು ತಿಂಗಳ ಬಡ್ಡಿ ಮೊದಲೇ ಕಟ್ಟಬೇಕು ಎಂದು ಹೇಳಿದ್ದಾರೆ. ಇದನ್ನು ನಂಬಿದ ಮಂಥೆನಾ ತರುಣ್ ಗಾಂಧಿ 1.80 ಕೋಟಿ ಹಣವನ್ನು ಪಾವತಿಸಿದ್ದಾರೆ. ಆ ನಂತರ ಸಾಲಕ್ಕಾಗಿ ಕಾಯ್ದಿದ್ದಾರೆ. ಆ ನಂತರ ಆ ವ್ಯಕ್ತಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಉದ್ಯಮಿ ಎಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಮುಖ್ಯ ಆರೋಪಿಗಾಗಿ ಬಲೆ ಬೀಸಿದ್ದಾರೆ.