ನುಗ್ಗೆಕಾಯಿ ಸಾಂಬಾರು ತುಂಬಾ ಚೆನ್ನಾಗಿರುತ್ತದೆ. ಹಾಗೇ ನುಗ್ಗೆಕಾಯಿ ಬಳಸಿ ಮಾಡುವ ಮಸಾಲ ಗ್ರೇವಿ ಕೂಡ ಅನ್ನದ ಜತೆ ತುಂಬಾನೇ ಚೆನ್ನಾಗಿರುತ್ತದೆ. ತುಂಬಾ ಸುಲಭವಾಗಿ ಮಾಡಬಹುದು. ಒಮ್ಮೆ ಮನೆಯಲ್ಲಿ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
4 ನುಗ್ಗೆಕಾಯಿ (ಕತ್ತರಿಸಿಕೊಂಡಿದ್ದು), 1 ದೊಡ್ಡ ಈರುಳ್ಳಿ – ಕತ್ತರಿಸಿಕೊಂಡಿದ್ದು, 2 ಟೊಮೆಟೊ – ಕತ್ತರಿಸಿಕೊಂಡಿದ್ದು, ಕರಿಬೇವು – ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್, ಅರಿಶಿನ ಪುಡಿ – 1/4 ಟೀ ಸ್ಪೂನ್, ಜೀರಿಗೆ – 1/4 ಟೀ ಸ್ಪೂನ್. ½ ಟೇಬಲ್ ಸ್ಪೂನ್ – ಖಾರದಪುಡಿ, ಗರಂ ಮಸಾಲ – 1/2 ಟೀ ಸ್ಪೂನ್, ಧನಿಯಾ ಪುಡಿ – 1 ಟೀ ಸ್ಪೂನ್, ಚಕ್ಕೆ – ಸಣ್ಣ ತುಂಡು, ಸೋಂಪು – 1/2 ಟೀ ಸ್ಪೂನ್, ಎಣ್ಣೆ – 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ನುಗ್ಗೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ ಅದು ಮುಳುಗುವಷ್ಟು ನೀರು ಸೇರಿಸಿ ಸ್ವಲ್ಪ ಉಪ್ಪು, ಅರಿಶಿನ ಸೇರಿಸಿ ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಸೋಂಪು, ಚಕ್ಕೆ, ಲವಂಗ, ಜೀರಿಗೆ, ಕರಿಬೇವು, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತೊಮ್ಮೆ ಫ್ರೈ ಮಾಡಿ. ನಂತರ ಟೊಮೆಟೊ ಸೇರಿಸಿ ಬೇಯುವವರೆಗೆ ಫ್ರೈ ಮಾಡಿ. ಇದಕ್ಕೆ ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲ ಸೇರಿಸಿ ಸ್ವಲ್ಪ ನೀರು ಸೇರಿಸಿ ಬೇಯಿಸಿಕೊಳ್ಳಿ.
ಇದು ದಪ್ಪಗೆ ಮಿಶ್ರಣವಾಗುತ್ತಿದ್ದಂತೆ ಇದಕ್ಕೆ ನುಗ್ಗೆಕಾಯಿಯನ್ನು ಬೇಯಿಸಿದ ನೀರು ಸಮೇತ ಹಾಕಿ ಕುದಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ.