ಬೆಳಿಗ್ಗೆ ಕಾಫಿ ಕುಡಿದರೆ ಅಷ್ಟೇ ಆ ದಿನ ಶುರುವಾಗುವುದು. ಕಾಫಿ ಕುಡಿಯದಿದ್ದರೆ ಯಾವ ಕೆಲಸ ಮಾಡುವುದಕ್ಕೂ ಕೆಲವರಿಗೆ ಮನಸ್ಸು ಬರುವುದಿಲ್ಲ. ಘಂ ಎಂದು ಕಾಫಿ ಪರಿಮಳ ಮೂಗಿಗೆ ಅಡರಿದರೆ ಎಷ್ಟು ಲೋಟ ಹೊಟ್ಟೆಗೆ ಸೇರಿತು ಎಂಬುದೇ ತಿಳಿಯುವುದಿಲ್ಲ. ಕಾಫಿಗೆ ಹಾಲು ಸೇರಿಸಿಕೊಂಡು ಕೆಲವರು ಕುಡಿಯುತ್ತಾರೆ. ಇನ್ನು ಕೆಲವರು ಬ್ಲಾಕ್ ಕಾಫಿ ಕುಡಿಯುತ್ತಾರೆ. ಈ ಬ್ಲಾಕ್ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ ಅದೇನೆಂದು ತಿಳಿಯೋಣ.
ಕಾಫಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿದೆ. ಜತೆಗೆ ಪೋಟ್ಯಾಷಿಯಂ, ಮೆಗ್ನೇಷಿಯಂ, ಸೋಡಿಯಂ ಕೂಡ ಇದೆ. ಇನ್ನು ಬ್ಲಾಕ್ ಕಾಫಿಯಲ್ಲಿ ಕ್ಯಾಲೋರಿ ಕೂಡ ತುಂಬ ಕಡಿಮೆ ಇದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳುವವರು ಇದನ್ನು ಸಂತೋಷದಿಂದ ಕುಡಿಯಬಹುದು.
ಇನ್ನು ನಮ್ಮ ದೇಹದಲ್ಲಿನ ಜೀವಕೋಶಗಳು ಹಾನಿಯಾಗದಂತೆ ಈ ಕಾಫಿ ತಡೆಯುತ್ತದೆ. ಬ್ಲಾಕ್ ಕಾಫಿ ಕುಡಿಯುವುದರಿಂದ ಮರೆವಿನ ರೋಗ, ಪಾರ್ಕಿನ್ ಸನ್ ರೋಗ ಬಾರದಂತೆ ತಡೆಯುವಲ್ಲಿ ಸಹಾಯಕಾರಿಯಾಗಿದೆ.
ಇದರಲ್ಲಿ ವಿಟಮಿನ್ ಬಿ5, ವಿಟಮಿನ್ ಬಿ3, ವಿಟಮಿನ್ ಬಿ2 ಹೇರಳವಾಗಿದೆ. ಇನ್ನು ವರ್ಕ್ ಔಟ್ ಮಾಡುವ ಮೊದಲು ಈ ಬ್ಲಾಕ್ ಕಾಫಿ ಸೇವನೆ ಮಾಡುವುದರಿಂದ ಶಕ್ತಿ ಹೆಚ್ಚುತ್ತದೆ.
ಬೇಕಾಗುವ ಸಾಮಗ್ರಿಗಳು:
1 ಕಪ್ ನೀರು, 2 ಟೀ ಸ್ಪೂನ್ ಕಾಫಿ ಪುಡಿ. 1 ಟೇಬಲ್ ಸ್ಪೂನ್ ತಣ್ಣಗಿನ ನೀರು.
ಮಾಡುವ ವಿಧಾನ: ಮೊದಲಿಗೆ ಒಂದು ಕಪ್ ನೀರನ್ನು ಕುದಿಸಿಕೊಳ್ಳಿ. ಒಂದು ಟೀ ಸ್ಪೂನ್ ತಣ್ಣಗಿನ ನೀರಿಗೆ ಕಾಫಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಕುದಿಯುತ್ತಿರುವ ನೀರಿಗೆ ಈ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಿಸಿ ಬಿಸಿ ಇರುವಾಗಲೇ ಕುಡಿಯಿರಿ.