
ನಿದ್ದೆ ನಮ್ಮ ಆರೋಗ್ಯದ ಮೂಲಮಂತ್ರ. ನಿದ್ದೆಯಲ್ಲಿ ನಮ್ಮ ದೇಹ ಮತ್ತು ಸ್ನಾಯುಗಳು ತಮ್ಮನ್ನು ತಾವು ಸರಿಪಡಿಸಿಕೊಳ್ಳುತ್ತವೆ. ಆಯಾಸದಿಂದ ಪರಿಹಾರ ಸಿಗುವುದು ಸಹ ನಿದ್ದೆಯಿಂದಲೇ. ಆದರೆ ಮಲಗುವ ವಿಧಾನ ಎಲ್ಲರಲ್ಲೂ ವಿಭಿನ್ನವಾಗಿರುತ್ತದೆ.
ಕೆಲವರು ಹೊಟ್ಟೆಯನ್ನು ಅಡಿ ಮಾಡಿ ಮಲಗಿದರೆ ಇನ್ನು ಕೆಲವರು ಎಡಬದಿ ಅಥವಾ ಬಲಬದಿಗೆ ಅಡ್ಡಲಾಗಿ ಮಲಗುತ್ತಾರೆ. ಕುಳಿತಲ್ಲೇ ನಿದ್ದೆ ಮಾಡುವವರೂ ಇದ್ದಾರೆ. ಆದ್ರೆ ಕುಳಿತು ನಿದ್ದೆ ಮಾಡುವುದರಿಂದ ಸಾಕಷ್ಟು ಅನಾನುಕೂಲಗಳಿವೆ.
ಬೆನ್ನು ನೋವು : ಕುಳಿತು ನಿದ್ದೆ ಮಾಡುವುದರಿಂದ ಬೆನ್ನುನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ಕುಳಿತುಕೊಂಡು ನಿದ್ರಿಸಿದ್ರೆ ಅದು ಬೆನ್ನುಮೂಳೆಯ ಆಕಾರವನ್ನು ಹದಗೆಡಿಸುತ್ತದೆ. ಇದರಿಂದಾಗಿ ಬೆನ್ನುನೋವು ಶುರುವಾಗಬಹುದು. ಹಿಂಭಾಗದಲ್ಲಿ ಊತ ಉಂಟುಮಾಡಬಹುದು.
ರಕ್ತ ಪರಿಚಲನೆ ಕುಂಠಿತ : ಒಂದೇ ಭಂಗಿಯಲ್ಲಿ ದೀರ್ಘಕಾಲ ಮಲಗುವುದರಿಂದ ನಿಮ್ಮ ರಕ್ತನಾಳಕ್ಕೆ ಅಡಚಣೆ ಉಂಟಾಗಬಹುದು. ಜುಮ್ಮೆನಿಸುವಿಕೆ ಸಮಸ್ಯೆಯೂ ಸಹ ಕಾಣಿಸಿಕೊಳ್ಳಬಹುದು. ರಕ್ತ ಹೆಪ್ಪುಗಟ್ಟುವಿಕೆಯು ಕಾಲುಗಳಲ್ಲಿ ಕೂಡ ಉಂಟಾಗಿ ನಡೆಯಲು ಕಷ್ಟವಾಗಬಹುದು.
ಕೀಲುಗಳಲ್ಲಿ ಬಿಗಿತ: ಕುಳಿತು ನಿದ್ರೆ ಮಾಡುವುದರಿಂದ ನಿಮ್ಮ ಕೀಲುಗಳಲ್ಲಿ ಬಿಗಿತದ ಸಮಸ್ಯೆಯೂ ಉದ್ಭವಿಸಬಹುದು. ಕಾಲುಗಳ ರಕ್ತನಾಳಗಳಲ್ಲಿ ಒತ್ತಡ ಉಂಟಾಗಬಹುದು. ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ದೇಹದ ಚಲನೆ ಸಾಧ್ಯವಾಗುವುದಿಲ್ಲ, ಇದು ಬಿಗಿತಕ್ಕೆ ಕಾರಣವಾಗುತ್ತದೆ.
ಕುಳಿತಲ್ಲೇ ನಿದ್ದೆ ಮಾಡುವುದರಿಂದ ಕೆಲವೊಂದು ಪ್ರಯೋಜನಗಳು ಸಹ ಇವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಷ್ಟವಾದ ಭಂಗಿಯಲ್ಲಿ ಮಲಗಲು ಸಾಧ್ಯವಾಗುವುದಿಲ್ಲ. ಮಲಗಲು ಸಾಧ್ಯವಾಗದೇ ಇದ್ದಾಗ ಕುಳಿತೇ ನಿದ್ದೆ ಮಾಡುವುದು ಆರಾಮದಾಯಕವೆನಿಸಬಹುದು.
ಕುಳಿತಲ್ಲೇ ನಿದ್ರಿಸುವುದಿರಂದ ಅನೇಕ ರೀತಿಯ ಜಠರ, ಕರುಳಿನ ಸಮಸ್ಯೆಗಳನ್ನು ನಿವಾರಿಸಬಹುದು. ಸರಿಯಾಗಿ ನಿದ್ದೆ ಮಾಡದಿದ್ದರೆ ಮಲಬದ್ಧತೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಕೆಲವೊಮ್ಮೆ ಕುಳಿತಲ್ಲೇ ನಿದ್ದೆ ಮಾಡುವುದು ಸಹ ಪರಿಣಾಮಕಾರಿ. ನಿದ್ದೆ ಮಾಡುವಾಗ ಅನೇಕರಿಗೆ ಉಸಿರಾಟದ ತೊಂದರೆ ಇರುತ್ತದೆ. ಆದರೆ ಕುಳಿತಲ್ಲೇ ನಿದ್ರಿಸಿದಾಗ ಸ್ನಾಯುಗಳು ತೆರೆದುಕೊಳ್ಳುವುದರಿಂದ ಉಸಿರಾಟದ ತೊಂದರೆ ಆಗುವುದಿಲ್ಲ.
ಕುಳಿತಲ್ಲೇ ನಿದ್ರಿಸುವುದು ಸಾವಿಗೆ ಕಾರಣವಾಗಬಹುದೇ ?
ಕುಳಿತು ನಿದ್ರಿಸುವುದರಿಂದ ಸಾವಿನ ಅಪಾಯವೂ ಇದೆ. ಕುಳಿತ ಭಂಗಿಯಲ್ಲೇ ನಿದ್ದೆ ಮಾಡಿದ್ರೆ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಬಹುದು. ಪಾದಗಳಲ್ಲಿ ಊತದ ಸಮಸ್ಯೆ, ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ದೀರ್ಘಕಾಲದವರೆಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ವ್ಯಕ್ತಿಗೆ ತೊಂದರೆಯಾಗಬಹುದು.