ಸತತ ವ್ಯಾಯಾಮ, ಉಪವಾಸ, ಜಿಮ್ ಗೆ ಹೋಗುವುದರಿಂದ ಮಾತ್ರ ತೂಕ ಇಳಿಸಲು ಸಾಧ್ಯವಿರುವುದಲ್ಲ. ಸರಿಯಾದ ನಿದ್ದೆಯಿಂದಲೂ ತೂಕ ಇಳಿಸಬಹುದು ಎಂಬುದು ನಿಮಗೆ ಗೊತ್ತೇ…?
ರಾತ್ರಿ ವೇಳೆ ಏಳು ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡುವುದರಿಂದ ತೂಕ ಕಡಿಮೆಯಾಗುವ ಬದಲು ಹೆಚ್ಚುವ ಸಾಧ್ಯತೆಗಳಿವೆ. ನಿದ್ದೆಯ ಕೊರತೆಯಿಂದ ಕಾರ್ಟಿಸೋಲ್ ಅಥವಾ ಒತ್ತಡದ ಹಾರ್ಮೋನ್ ಹೆಚ್ಚಳಕ್ಕೆ ಕಾರಣವಾಗಬಹುದು.
ಎಚ್ಚರವಾಗಿದ್ದಷ್ಟೂ ಹೊತ್ತು ತಿನ್ನುವ ಮನಸ್ಸು ನಮಗಾಗುತ್ತಿರುತ್ತದೆ. ಅಲ್ಲದೆ ಬಾಯಾಡಿಸುವ ನೆಪದಲ್ಲಿ ಏನನ್ನಾದರೂ ತಿನ್ನುತ್ತಿರುತ್ತೇವೆ. ಅದನ್ನು ನಿವಾರಿಸಬೇಕೆಂದಿದ್ದರೆ ಸಾಧ್ಯವಾದಷ್ಟು ಬೇಗ ನಿದ್ರಿಸಿ. ರಾತ್ರಿ ಹೆಚ್ಚು ಎಚ್ಚರವಿದ್ದಷ್ಟು ಹಸಿವು ಹೆಚ್ಚು ಎಂಬುದನ್ನು ಸಂಶೋಧನೆ ದೃಢಪಡಿಸಿದೆ. ಅನಗತ್ಯ ಆಹಾರ ಹೊಟ್ಟೆ ಸೇರುವ ಬದಲು ಬೇಕಾದ್ದನ್ನಷ್ಟೇ ಸೇವಿಸಿ.
ರಾತ್ರಿ ಊಟದ ವೇಳೆ ಅಥವಾ ಬಳಿಕ ಒಣಹಣ್ಣುಗಳು ಮತ್ತು ಮಾಂಸಗಳನ್ನು ಸೇವಿಸುವುದರಿಂದ ಸಹಜವಾಗಿ ಗಾಢ ನಿದ್ದೆ ನಿಮ್ಮದಾಗುತ್ತದೆ. ಹಾಗಾಗಿ ನಿದ್ರಾಹೀನತೆ ಇರುವವರಿಗೂ ಇದು ಸೂಕ್ತ ಆಹಾರ.
ಟಿವಿ, ಮೊಬೈಲ್ ಮೊದಲಾದ ಸಾಧನಗಳನ್ನು ಮಲಗುವ ಮೂವತ್ತು ನಿಮಿಷ ಮೊದಲೇ ಆಫ್ ಮಾಡಿ. ಇದರಿಂದ ನಿಮಗೆ ಚೆನ್ನಾಗಿ ನಿದ್ದೆ ಬರುತ್ತದೆ ಮತ್ತು ತೂಕವೂ ಕಡಿಮೆಯಾಗುತ್ತದೆ.
ಮಲಗುವ ಮುನ್ನ ಬಿಸಿನೀರಿನ ಸ್ನಾನ ಮತ್ತು ಪ್ರೀತಿಪಾತ್ರರ ಅಪ್ಪುಗೆ ಪಡೆಯಿರಿ. ಇದರಿಂದ ಸಿಹಿಯಾದ ನಿದ್ದೆ ನಿಮ್ಮದಾಗುತ್ತದೆ.