ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಾವು ಮಾತನಾಡುತ್ತಲೇ ಇರುತ್ತೇವೆ. ಕೆಲವರಿಗಂತೂ ಒಂದು ಕ್ಷಣವೂ ಸುಮ್ಮನೆ ಕೂರುವುದು ಅಸಾಧ್ಯ. ಇನ್ನು ಕೆಲವರದ್ದು ಮಿತವಾದ ಮಾತು, ಶಾಂತ ಸ್ವಭಾವ. ಜಾಸ್ತಿ ಬಡಬಡನೆ ಮಾತನಾಡದೇ ಇದ್ದರೂ ಅವಕಾಶ ಸಿಕ್ಕಾಗ ತಮ್ಮ ಮನಸ್ಸಿನಲ್ಲಿರೋದನ್ನು ಅವರು ಹೊರಹಾಕುತ್ತಾರೆ. ಈ ರೀತಿಯಾಗಿ ಮಾನವ ಸಂಭಾಷಣೆಯ ಪ್ರಕ್ರಿಯೆ ಎಂದಿಗೂ ಕೊನೆಗೊಳ್ಳುವುದಿಲ್ಲ.
ನೀವು ಒಂದು ದಿನದಲ್ಲಿ ಎಷ್ಟು ಪದಗಳನ್ನು ಮಾತನಾಡುತ್ತೀರಿ ಎಂದು ಯೋಚಿಸಿದ್ದೀರಾ? ಒಬ್ಬ ವ್ಯಕ್ತಿಯು ಒಂದು ದಿನದಲ್ಲಿ ಎಷ್ಟು ಪದಗಳನ್ನು ಮಾತನಾಡಬಹುದು ಅನ್ನೋದನ್ನು ಲೆಕ್ಕ ಹಾಕಲಾಗಿದೆ. ಲಿಂಕ್ಡ್‌ಇನ್ ಲರ್ನಿಂಗ್ ಇನ್‌ಸ್ಟ್ರಕ್ಟರ್ ಜೆಫ್ ಅನ್ಸೆಲ್ ರಿಸರ್ಚ್ ಪ್ರಕಾರ, ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಕನಿಷ್ಠ 7000 ಪದಗಳನ್ನು ಮಾತನಾಡುತ್ತಾನೆ. ಕೆಲವರು ಅದಕ್ಕಿಂತ ಹೆಚ್ಚು ಕೂಡ ಮಾತನಾಡಬಹುದು.
7000 ಪದಗಳು ಒಂದು ದಿನಕ್ಕಾದರೆ ಒಬ್ಬ ವ್ಯಕ್ತಿ ಜೀವನವಿಡೀ ಎಷ್ಟು ಮಾತನಾಡಬಹುದು ಎಂಬ ಕುತೂಹಲ ಸಹಜ. ಸಂಶೋಧನೆಯ ಪ್ರಕಾರ ಒಬ್ಬ ವ್ಯಕ್ತಿ ತನ್ನ ಇಡೀ ಜೀವನದಲ್ಲಿ 8,60,341,500 ಪದಗಳನ್ನು ಅಂದರೆ ಸುಮಾರು 86 ಕೋಟಿ ಪದಗಳನ್ನು ಮಾತನಾಡುತ್ತಾನೆ. ಈ ಮಾಹಿತಿಯನ್ನು ಬ್ರಿಟಿಷ್ ಬರಹಗಾರ ಗೈಲ್ಸ್ ಬ್ರಾಂಡ್ರೆತ್ ಅವರ ದಿ ಜಾಯ್ ಆಫ್ ಲೆಕ್ಸ್: ಹೌ ಟು ಹ್ಯಾವ್ ಫನ್ ವಿತ್ 860,341,500 ವರ್ಡ್ಸ್ ಎಂಬ ಪುಸ್ತಕದಲ್ಲಿ ನೀಡಲಾಗಿದೆ.
ಈ ಅಂಕಿ ಅಂಶಗಳನ್ನು ನಿಘಂಟಿನೊಂದಿಗೆ ಹೋಲಿಕೆ ಮಾಡಿದ್ರೆ ಇನ್ನೊಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳು ಬಹಿರಂಗವಾಗುತ್ತವೆ. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಇಡೀ ಜೀವನದಲ್ಲಿ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನ 20 ಸಂಪುಟಗಳನ್ನು 14.5 ಬಾರಿ ಓದುವುದಕ್ಕೆ ಆತನ ಮಾತುಗಳು ಸಮನಾಗಿರುತ್ತವೆ.